ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ತುಂಗಾ ಆರತಿ ನಿಮಿತ್ತ ಮಂಗಳವಾರ ಮಹಿಳೆಯರಿಗಾಗಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಗಜೇಂದ್ರಗಡದ ಸಂಸ್ಥಾನ ಕೋಡಿಮಠ ತಳ್ಳಿಹಾಳ ಪೀಠಾಧಿಪತಿ ಆರೂಢ ಶ್ರೀ ಶರಣಬಸವ ಮಹಾಸ್ವಾಮಿ ಚಾಲನೆ ನೀಡಿದರು.

ಮುನಿರಾಬಾದ್: ಒಂಬತ್ತು ತಿಂಗಳು ತನ್ನ ಗರ್ಭದಲ್ಲಿ ಇಟ್ಟುಕೊಂಡು ಮಕ್ಕಳಿಗೆ ಜನ್ಮ ನೀಡಿ, ಸಾಕಿ, ಸಲಹಿದ ತಾಯಿಯ ಋಣವನ್ನು ತೀರಿಸಲು ಅಸಾಧ್ಯ ಎಂದು ಗಜೇಂದ್ರಗಡದ ಸಂಸ್ಥಾನ ಕೋಡಿಮಠ ತಳ್ಳಿಹಾಳ ಪೀಠಾಧಿಪತಿ ಆರೂಢ ಶ್ರೀ ಶರಣಬಸವ ಮಹಾಸ್ವಾಮಿಗಳು ನುಡಿದರು.

ಅವರು ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ತುಂಗಾ ಆರತಿ ನಿಮಿತ್ತ ಮಂಗಳವಾರ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ದೇಶದಲ್ಲಿ 58 ಶಕ್ತಿ ಪೀಠಗಳಿವೆ, ಅದರಲ್ಲಿ ಹುಲಿಗಮ್ಮ ಶಕ್ತಿ ಪೀಠವೂ ಒಂದಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಉಡಿ ತುಂಬಿಸಿ ಕೊಳ್ಳುತ್ತಿರುವ ಮಹಿಳೆಯರು ನಿಜಕ್ಕೂ ಪುಣ್ಯವಂತರು ಎಂದರು.

ಹುಲಿಗಿಯ ಆರಾಧ್ಯದೇವಿ ಶ್ರೀ ಹುಲಿಗೆಮ್ಮ ದೇವಿ ಅನೇಕ ಪವಾಡಗಳನ್ನು ಮಾಡಿದ್ದಾಳೆ ಎಂದು ಹೇಳಿದ ಶ್ರೀಗಳು, ಹುಲಿಗೆಮ್ಮ ದೇವಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಹಿಂದಿನ ಸ್ವಾಮೀಜಿಯವರಿಗೆ ಸಾಕ್ಷಾತ್ ದರ್ಶನ ನೀಡಿದ ಪ್ರಸಂಗವನ್ನು ವಿವರಿಸಿದರು.

ನಮ್ಮ ದೇಶ ಭವ್ಯ ಸಂಸ್ಕೃತಿಯನ್ನು ಹೊಂದಿದೆ. ವಿಶ್ವದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಏಕೈಕ ದೇಶವೆಂದರೆ ಅದು ಭಾರತ. ಯಾವ ದೇಶದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಗಳು ಹಾಗೂ ಸಾಮೂಹಿಕ ವಿವಾಹಗಳು ಜರುಗುತ್ತವೆಯೋ ಆ ದೇಶಕ್ಕೆ ಎಂದು ಬಡತನ ಬರುವುದಿಲ್ಲ ಎಂದು ಸ್ವಾಮೀಜಿ ಹೇಳಿದರು.

ಸ್ವಾಮೀಜಿ ಭವಿಷ್ಯವಾಣಿ: ಭಾರತ ದೇಶವು ಮುಂಬರುವ ದಿನಗಳಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಗಜೇಂದ್ರಗಡದ ಸಂಸ್ಥಾನ ತಳ್ಳಿಹಾಳ ಕೋಡಿಮಠದ ಶ್ರೀಗಳು ಈ ಸಂದರ್ಭದಲ್ಲಿ ಭವಿಷ್ಯ ನುಡಿದರು.

ಆನಂತರ ಶ್ರೀಗಳು ಉಡಿ ತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಅರ್ಚನಾ ರಾಘವೇಂದ್ರ ಹಿಟ್ನಾಳ್, ಮಂಜುಳಾ ಕರಡಿ, ರಾಧಾ ಅನಿಲ್ ಕುಮಾರ್, ನಾಗರತ್ನಾ ಪೂಜಾರ್, ಚಂದ್ರಕಲಾ ಕೃಷ್ಣಮೂರ್ತಿ, ನೀಲಮ್ಮ ಗವಿಸಿದ್ದಪ್ಪ, ರಾಧಿಕಾ ಜಗನ್ನಾಥ್, ಹಾಗೂ ಭಾಗ್ಯಲಕ್ಷ್ಮಿ, ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ್ ರಾವ್, ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪಾಲಾಕ್ಷಪ್ಪ ಗುಂಗಾಡಿ, ಈರಣ್ಣ, ವೆಂಕಟೇಶ್ ಉಪಸ್ಥಿತರಿದ್ದರು. ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.