ಸಾರಾಂಶ
ದಾಬಸ್‌ಪೇಟೆ: ಜೀವನದಲ್ಲಿ ಗುರು-ಹಿರಿಯರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸೋಂಪುರ ಹೋಬಳಿಯ ಕೆರೆಕತ್ತಿಗನೂರು ಬಳಿಯ ಸಮಾಧಾನ ಮಠದ ಆವರಣದಲ್ಲಿ ಆಯೋಜಿಸಿದ್ದ ಗುರು ಹಿರಿಯರ ವಂದನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಸ್ಮರಣೆ ಅತೀ ಮುಖ್ಯ. ಗುರುವಿಂದ ಸದಾಚಾರ, ಶಿವಚಾರ ಕಲಿಯುತ್ತೇವೆ. ಮೌನ ತಪಸ್ವೀಗಳು ಸಮಾಜದಲ್ಲಿ ಅಜ್ಞಾನ, ಮೂಢನಂಬಿಕೆ, ಪ್ರಾಣಿ ಬಲಿ, ದೇವದಾಸಿ, ಪದ್ಧತಿ, ಮದ್ಯಪಾನ ಪಿಡುಗುಗಳನ್ನು ದೂರ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ಸ್ವಚ್ಛತಾ ಆಂದೋಲನವನ್ನು ಇಡೀ ನಾಡಿಗೆ ಪಸರಿಸಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಗುರುವಂದನಾ ಕಾರ್ಯಕ್ರಮ ನನ್ನ ಜೀವನದ ಸೌಭಾಗ್ಯ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ, ಸಮಾಜದಲ್ಲಿ ಶಾಂತಿ ನಿರ್ಮಾಣ ಮಾಡುವುದರ ಜೊತೆಗೆ, ನಾಲಿಗೆಯಿಂದ ಪ್ರತಿದಿನ ಅಪಚಾರವಾಗುತ್ತದೆ. ಮೌನದಿಂದ ಮಾತ್ರ ಜಗತ್ತು ಗೆಲ್ಲಬಹುದು, ಭಕ್ತರ ದರ್ಶನಕ್ಕೆ ಈ ಕಾರ್ಯ ಉತ್ತಮ ಮಾರ್ಗವಾಗಿದೆ ಎಂದರು.ಮನುಷ್ಯ ಯಾವಾಗ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಾನೋ ಪ್ರಾಕೃತಿಕ ವಿಕೋಪದ ಮೂಲಕ ದೇವರೇ ಅದಕ್ಕೆ ತಕ್ಕ ಉತ್ತರ ಕೊಡುತ್ತಿದ್ದಾನೆ. ಆದರೂ ನಾವ್ಯಾರು ಎಚ್ಚೆತ್ತುಕೊಳ್ಳುತ್ತಿಲ್ಲ. ದುರಾಸೆಗಳನ್ನು ಬಿಡುತ್ತಿಲ್ಲ. ಆಸೆ ಇರಬೇಕು ಆದರೆ ದುರಾಸೆ ಇರಬಾರದು, ದುರಾಸೆಗಳು ಮನುಷ್ಯತ್ವವನ್ನು ನಾಶ ಮಾಡುತ್ತಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಮನುಷ್ಯ ರಾಕ್ಷಸಿ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದರು.
ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ, ಭಕ್ತರ ಪ್ರತಿ ಕಾಣಿಕೆಯೂ, ಸಮಾಜದ ಏಳಿಗೆಗೆ ಬಳಸಿದ್ದೇವೆ. ಹಾನಗಲ್ ಕುಮಾರ ಮಹಾಸ್ವಾಮೀಜಿಗಳ ತತ್ವ ಪ್ರತಿಯೊಬ್ಬರಿಗೂ ಅನುಸರಣೀಯ. ಸಮಾಜದಲ್ಲಿ ಗುರು ಹಿರಿಯರ ಪಾತ್ರ ಬಹಳ ಮುಖ್ಯವಾಗಿದೆ. ಗುರು, ಸಂತ, ಮತ್ತು ಹಿರಿಯರನ್ನು ಸ್ಮರಿಸುವುದು ನಿಜವಾದ ಸಂಸ್ಕೃತಿ ಎಂದು ಹೇಳಿದರು.ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಪೂಜ್ಯರಿಗೆ 84 ವರ್ಷವಾಗಿದೆ. ಆದರೂ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ. ಮೌನ ತಪಸ್ವೀ ಶ್ರೀಗಳು 1947ರಲ್ಲಿ ಜನಿಸಿದವರು. ಕೃತಾರ್ಥಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಬಾಲ್ಯದಲ್ಲಿ ಗುರುದೇವಾ ಸಂಸ್ಥೆ ಹುಟ್ಟಿಹಾಕಿ ಹೆಮ್ಮರವಾಗಿ ಬೆಳೆದಿದೆ ಎಂದರು.ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಗೋಗ್ಗಿ ಹಳ್ಳಿ ಪೂಜ್ಯರು, ಮೇಲಣಗವಿ ಮಠದ ಡಾ.ಶ್ರೀ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕ ವೀರಣ್ಣ ಚರಂತಿಮಠ, ಬಸವರಾಜ ಭೀಮಳ್ಳಿ, ಪಂಡಿತ್ ಹನುಮಂತರಾಯ, ಕೃಷಿ ಅಧಿಕಾರಿ ಮಹೇಶ್ ಇದ್ದರು.