ತಾಯಿ, ಗುರುವಿನ ಋಣ ತೀರಿಸುವುದು ಅಸಾಧ್ಯ: ಫಕೀರ ದಿಂಗಾಲೇಶ್ವರ ಶ್ರೀ

| Published : Nov 21 2025, 02:30 AM IST

ತಾಯಿ, ಗುರುವಿನ ಋಣ ತೀರಿಸುವುದು ಅಸಾಧ್ಯ: ಫಕೀರ ದಿಂಗಾಲೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ಮತ್ತು ಗುರು ತನ್ನ ಮಕ್ಕಳು ಎತ್ತರಕ್ಕೆ ಏರಿದರೆ ಸಂತೋಷಪಡುವ ಜೀವಗಳು. ಗುರುವಿನ ಋಣ ತೀರಿಸುವುದು ಜನ್ಮದಲ್ಲಿ ಸಾಧ್ಯವಿಲ್ಲ.

ಲಕ್ಷ್ಮೇಶ್ವರ: ಜಗತ್ತಿನಲ್ಲಿ ವಿದ್ಯೆ ನೀಡಿದ ಗುರುವಿನ ಮತ್ತು ಜನ್ಮ ನೀಡಿದ ತಾಯಿಯ ಋಣ ತೀರಿಸುವುದು ಅಸಾಧ್ಯ. ಗುರು ಬಾಳಿಗೆ ಬೆಳಕು ನೀಡಿದರೆ ತಾಯಿ ಬದುಕಿಗೆ ನೆಲೆ ನೀಡುವ ಕಾರ್ಯ ಮಾಡುತ್ತಾರೆ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮಿಗಳು ತಿಳಿಸಿದರು.

ಸಮೀಪದ ಶಿಗ್ಲಿಯಲ್ಲಿ ಭಾನುವಾರ ರಾತ್ರಿ ೧೯೯೨- ೯೩ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಕಲಿತ ವಿದ್ಯಾರ್ಥಿಗಳ ಹಮ್ಮಿಕೊಂಡ ಗುರುನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗುರು ವಿದ್ಯಾರ್ಥಿಗಳಿಗೆ ಜಾತಿ, ಮತ ನೋಡದೆ ಅಕ್ಷರ ಬೋಧನೆ ಮಾಡುವ ಮೂಲಕ ಅವರ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡುತ್ತಾನೆ. ಗುರುವಿನ ಮಹಾತ್ಮೆ ಅಪಾರ. ಗುರು ಹಾಗೂ ತಾಯಿಯ ಆಸೆ ಈಡೇರಿಸದೆ ಮಕ್ಕಳು ಇದ್ದರೂ ಉಪಯೋಗವಿಲ್ಲ. ತಾಯಿ ಮತ್ತು ಗುರು ತನ್ನ ಮಕ್ಕಳು ಎತ್ತರಕ್ಕೆ ಏರಿದರೆ ಸಂತೋಷಪಡುವ ಜೀವಗಳು. ಗುರುವಿನ ಋಣ ತೀರಿಸುವುದು ಜನ್ಮದಲ್ಲಿ ಸಾಧ್ಯವಿಲ್ಲ ಎಂದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ನೀಲಗಿರಿ ತಳವಾರ ಮಾತನಾಡಿ, ನಮ್ಮ ಗುರುಗಳು ಉತ್ತಮ ಶಿಕ್ಷಣ ನೀಡಿದ್ದರಿಂದ ನಾವು ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಯಿತು ಎಂದರು.ಜಾನಪದ ಸಾಹಿತಿ ಡಾ. ಶಂಭು ಬಳಿಗಾರ ಮಾತನಾಡಿ, ನಮ್ಮ ಗುರುಗಳು ನೀಡಿದ ಮೌಲ್ಯಯುತ ಮತ್ತು ನೈತಿಕ ಶಿಕ್ಷಣವು ನಮ್ಮನ್ನು ಉತ್ತಮ ನಾಗರಿಕರನ್ನಾಗಿ ಮಾಡಿದೆ. ಅವರು ಹಾಕಿಕೊಟ್ಟ ಉದಾತ್ತ ಧ್ಯೇಯಗಳು ನಮ್ಮಲ್ಲಿ ಈಗಲೂ ಉಳಿದುಕೊಂಡಿದ್ದರಿಂದ ಉತ್ತಮ ನಾಗರಿಕರನ್ನಾಗಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಸ್.ಪಿ. ಬಳಿಗಾರ, ಟಿ. ಈಶ್ವರ, ಶಂಕರ ರಾಗಿ, ಎನ್.ಎನ್. ನೆಗಳೂರ, ಎಂ.ಕೆ. ಮಾದನಹಳ್ಳಿ, ಶಿವಾನಂದ ರಟಗೇರಿ, ದೇವರಾಜ ಸಾಲಿ ಇದ್ದರು. ಕಾರ್ಯಕ್ರಮದಲ್ಲಿ ಶಿಗ್ಲಿಯ ಹಳೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಅದ್ಧೂರಿ ಗುರುನಮನ ಸಲ್ಲಿಸಿದ್ದು ವಿಶೇಷವಾಗಿತ್ತು.