ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರು
ವೀರಶೈವದಿಂದ ಲಿಂಗಾಯತ ಧರ್ಮವನ್ನು ಬೇರ್ಪಡಿಸಲು ಖಂಡಿತ ಸಾಧ್ಯವಾಗದು ಎಂದು ಉಜ್ಜಿಯನಿ ಪೀಠದ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಪಟ್ಟಣದ ಚಾನುಕೋಟಿ ಮಠಾದ ಸಭಾಂಗಣದಲ್ಲಿ ಆದಿ ಜಗದ್ಗುರು ಪಂಚಾಚಾರ್ಯರರ ಯುಗಮಾನೋತ್ಸವ ಮತ್ತು ಚಾನುಕೋಟಿ ಶ್ರೀ ಡಾ. ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮೀಜಿಯವರ ಷಷ್ಠಿ ಪೂರ್ತಿ ಸಮಾರಂಭದ 13ನೇ ದಿನದ ಕಾರ್ಯಕ್ರಮದಲ್ಲಿ ಮಂಗಳವಾರ ಸಂಜೆ ಕಾಶಿ ಜಗದ್ಗುರುಗಳು ರಚಿಸಿರುವ ವೀರಶೈವ ಪಂಚಾಸೂತ್ರಾಣೆ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಹರಪ್ಪ ಮತ್ತು ಮೆಹಂಜೋದಾರ ಪೂರ್ವ ಇತಿಹಾಸವನ್ನು ವೀರಶೈವ ಧರ್ಮ ಹೊಂದಿದ್ದು, ಇಂತಹ ಮಹೋನ್ನತ ಧರ್ಮದಲ್ಲಿ ಇದೀಗ ಲಿಂಗಾಯತ ಧರ್ಮ ಭೇದವನ್ನು ಎಣಿಸಲು ಮುಂದಾಗಿರುವವರು ತಮಗೆ ಬೇಕಾದ ಅಂಶಗಳನ್ನು ಮಾತ್ರ ಪೂರಕವಾಗಿ ಬಳಸಿಕೊಂಡು ಇತರ ಪ್ರತಿಕೂಲ ಅಂಶಗಳ ಬಗ್ಗೆ ಚಕಾರ ಎತ್ತದೆ ಉತ್ತರಿಸಲು ಮುಂದಾಗದೆ ಪಲಾಯನ ವಾದ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಕಾಶಿ ಪೀಠದ ಹಿರಿಯ ಜಗದ್ಗುರುಗಳು ಶ್ರೀ ಸಿದ್ದಾಂತ ಶಿಖಾಮಣಿಯಲ್ಲಿನ ಸೂತ್ರ ಮತ್ತು ವಿಚಾರಗಳನ್ನು ಎಲ್ಲಿಯೂ ಹಳಿ ತಪ್ಪದಂತೆ ಸಮಗ್ರವಾಗಿ ಅಧ್ಯಯಾನ ಮಾಡಿ ಭಕ್ತರಿಗೆ ನಿರಂತರ ಉಪದೇಶ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಶ್ರೀ ಸಿದ್ದಾಂತ ಶಿಖಾಮಣಿ ಗ್ರಂಥ ರಾಷ್ಟ್ರದ 19 ಭಾಷೆಗಳಿಗೆ ಭಾಷಾಂತರಗೊಂಡಿದೆ. ರಷ್ಯಾನ್ ಭಾಷೆ ಸೇರಿ ಮೂರು ಅಂತಾರಾಷ್ಟ್ರಿಯ ಭಾಷೆಗಳಿಗೆ ಭಾಷಾಂತರಗೊಂಡಿದೆ ಎಂದು ಹೇಳಿದರು.
ಡಾ. ಶಿವಕುಮಾರ ಸ್ವಾಮೀಜಿ, ಸಿಂಧಗಿ ಮಠದ ಶ್ರೀಗಳು ವಿಚಾರವಾದಿ ಸೋಮೇಶ್ವರ ಕುಲಕರ್ಣಿ, ಕಾಂಗ್ರೆಸ್ ಮುಖಂಡ ಆನಂದ ಗಡದೇವರಮಠ ಮಾತನಾಡಿದರು.ಚಾನುಕೋಟಿ ಮಠಾಧ್ಯಕ್ಷ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಮುಖಂಡರಾದ ಎಂಎಂಜೆ ಹರ್ಷವರ್ಧನ್, ಎಸ್. ತಿಂದಪ್ಪ, ಪಿ. ಶ್ರೀಧರ ಶೆಟ್ಟಿ, ಮಹೇಂದ್ರ ಕುಮಾರ್ ಜೈನ್, ಚಾಪೆ ಚಂದ್ರಪ್ಪ ಮತ್ತಿತರರಿದ್ದರು.
ಪತ್ರಕರ್ತ ಭೀಮಣ್ಣ ಗಜಾಪುರ ಪ್ರಾಸ್ತಾವಿಕ ಮಾತನಾಡಿದರು. ಅಟವಾಲ್ ಭೋಜರಾಜ ವಂದಿಸಿದರು. ಸಿ.ಮ. ಗುರುಬಸವರಾಜ ನಿರೂಪಿಸಿದರು.