ಶಾ ಜತೆ ಸೋಮಣ್ಣ, ಕಾರಜೋಳ ಭೇಟಿ ಕುತೂಹಲ ರಾಜ್ಯ ಬಿಜೆಪಿ ವಿದ್ಯಮಾನದ ಚರ್ಚೆ?

| Published : Feb 12 2025, 12:31 AM IST

ಸಾರಾಂಶ

ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆದಿರುವ ಮಧ್ಯೆಯೇ ಪಕ್ಷದ ಇಬ್ಬರು ಹಿರಿಯ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯಾಧ್ಯಕ್ಷರ ನೇಮಕ ಸಂಬಂಧ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆದಿರುವ ಮಧ್ಯೆಯೇ ಪಕ್ಷದ ಇಬ್ಬರು ಹಿರಿಯ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮತ್ತು ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಮಂಗಳವಾರ ದೆಹಲಿಯ ಸಂಸತ್ ಭವನದಲ್ಲಿ ಅಮಿತ್ ಶಾರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಮೇಲ್ನೋಟಕ್ಕೆ ಉಭಯ ನಾಯಕರು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಶಾ ಅವರನ್ನು ಭೇಟಿಯಾಗಿದ್ದಾರೆ. ಹಾಗಂತ ಅವರು ಅದನ್ನು ಸಾಮಾಜಿಕ ಜಾಲತಾಣದ ಮೂಲಕವೂ ಬಹಿರಂಗಪಡಿಸಿದ್ದಾರೆ. ಆದರೆ, ಅಸಲಿಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುವುದೇ ಮುಖ್ಯ ಉದ್ದೇಶ‍ವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಅವರೇ ಈ ನಾಯಕರನ್ನು ಕರೆಸಿಕೊಂಡಿದ್ದರೋ ಅಥವಾ ಈ ನಾಯಕರೇ ಸ್ವಯಂ ಅಮಿತ್ ಶಾ ಅವರ ಭೇಟಿಗೆ ತೆರಳಿದ್ದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಭೇಟಿ ಹಿಂದೆ ರಾಜ್ಯ ಬಿಜೆಪಿಯ ಬೆಳವಣಿಗೆ ಇದೆ ಎನ್ನಲಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಕಳೆದ ಒಂದು ವಾರದಲ್ಲಿ ಎರಡು ಬಾರಿ ದೆಹಲಿಗೆ ತೆರಳಿ ವಿಜಯೇಂದ್ರ ಅವರನ್ನು ಮುಂದುವರೆಸುವುದು ಬೇಡ ಎಂಬುದನ್ನು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು. ಸೋಮವಾರವಷ್ಟೇ ಸೋಮಣ್ಣ ಅವರ ಅಧಿಕೃತ ನಿವಾಸದ ಪೂಜಾ ಕಾರ್ಯಕ್ರಮದ ನೆಪದಿಂದ ಭಿನ್ನಮತೀಯರೂ ಸೇರಿ ಹಲವು ನಾಯಕರು ಒಂದೆಡೆ ಸೇರಿ ಮಾತುಕತೆ ನಡೆಸಿದ್ದರು.

ಇದರ ಮರುದಿನವೇ ಸೋಮಣ್ಣ ಮತ್ತು ಕಾರಜೋಳ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ.

ಸದ್ಯ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ನೇಮಕ ಕುರಿತು ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿರುವುದು ಅಮಿತ್ ಶಾ ಅವರು. ಇನ್ನುಳಿದ ರಾಷ್ಟ್ರೀಯ ನಾಯಕರು ಈ ವಿಷಯದಲ್ಲಿ ಏನೇ ಹೇಳಿದರೂ ಅದು ಕೊನೆಯಲ್ಲಿ ಅಮಿತ್ ಶಾ ಅವರ ಬಳಿಯೇ ಇತ್ಯರ್ಥವಾಗಬೇಕು.

ರೈಲ್ವೆ ಯೋಜನೆ ವಿಚಾರ ಪ್ರಸ್ತಾಪ: ತಮ್ಮ ಭೇಟಿ ಬಗ್ಗೆ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅಮಿತ್ ಶಾ ಅವರ ಭೇಟಿ ವೇಳೆ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗದ ಭಾಗವಾದ ತಿಮ್ಮರಾಜನಹಳ್ಳಿ ಮತ್ತು ತಾವರೆಕೆರೆ ಮಧ್ಯದ ರೈಲ್ವೆ ಕಾಮಗಾರಿಗೆ ಸಂಬಂಧಿಸಿ ಕೇಂದ್ರ ಗೃಹ ಇಲಾಖೆಗೆ ರೈಲ್ವೆ ಬೋರ್ಡ್‌ ಕಳುಹಿಸಿದ ಪ್ರಸ್ತಾವನೆಯನ್ನು ಅನುಮೋದಿಸಿಕೊಡಬೇಕೆಂದು ಕೋರಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅತೀವ ಸಂತಸ ತಂದಿದೆ. ರಾಜ್ಯದ ಹಾಗೂ ವಿಶೇಷವಾಗಿ ತುಮಕೂರು ಜನತೆಯ ಪರ ಅಮಿತ್ ಶಾ ಅವರಿಗೆ ಇದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಗೋವಿಂದ ಕಾರಜೋಳ ಅವರು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY-AIBP) ಯೋಜನೆಯಡಿ ಭದ್ರಾ ಮೇಲ್ದಂಡೆ ಯೋಜನೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ಕುರಿತು ಚರ್ಚಿಸಿದ್ದೇನೆ. ಅಮಿತ್ ಶಾ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದ್ದಾರೆ.