ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಡಿನ ನೆಲ, ಜಲ, ಭಾಷೆ, ಸಾರ್ವಜನಿಕರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಮೂರನೇ ಬಾರಿ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಜವಾಬ್ದಾರಿ ಸಿಕ್ಕಿದ್ದು ನನ್ನ ಸೌಭಾಗ್ಯ. ಕೊನೆ ಉಸಿರು ಇರುವವರೆಗೂ ಇದನ್ನು ಮರೆಯುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಣ್ತುಂಬಿ ಸಂತೋಷ ಪಟ್ಟರು.ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣಸಂಚಿಕೆ ಬೆಲ್ಲದಾರತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಈ ಹಿಂದೆ ಜಿಲ್ಲೆಯಲ್ಲಿ ಎರಡು ಬಾರಿ ನಡೆದಿದ್ದ ಸಾಹಿತ್ಯ ಸಮ್ಮೇಳನದಲ್ಲಿ 2ನೇ ಸಮ್ಮೇಳನ ನೋಡಿದ್ದೆ. 3 ಬಾರಿ ಜವಾಬ್ದಾರಿ ವಹಿಸಿದ್ದು ಅತ್ಯಂತ ಸಂತೋಷ ಉಂಟು ಮಾಡಿದೆ ಎಂದರು.
ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಸಾಹಿತಿಗಳು, ಪರಿಷತ್ತಿನ ಪದಾಧಿಕಾರಿಗಳು, ಶಾಸಕರು, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಸಂಘಟನೆಗಳು, ಸಾರ್ವಜನಿಕರು ಕಾರಣಕರ್ತರು. ರಾಜ್ಯದ ಅನೇಕ ಜಿಲ್ಲೆಗಳಿಗೆ ಹೋದಾಗ ಹಲವು ಸಾಹಿತಿಗಳು ನನ್ನ ಬಳಿ ಬಂದು ಮುಟ್ಟಿ ಮಾತನಾಡಿಸಿ ಸಾಹಿತ್ಯ ಸಮ್ಮೇಳನದ ಬಗ್ಗೆ ನಾಲ್ಕು ಮಾತು ಹೇಳುವ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ ಎಂದರು.ಅದೇ ರೀತಿ ಹೊರ ದೇಶಗಳಲ್ಲೂ ಬಂದಿರುವವವರು, ನೋಡಿರುವವರು ಕೇಳಿರುವವರು, ಸಮ್ಮೇಳನಾಧ್ಯಕ್ಷರಾದ ಗೊರೂಚರು ಮಂಡ್ಯ ಸಮ್ಮೇಳನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು 87ನೇ ಸಾಹಿತ್ಯ ಸಮ್ಮೇಳನ ಮೈಲಿಗಲ್ಲಾಗಿದೆ. ಇದು ಮಂಡ್ಯ ಜಿಲ್ಲೆಯ ಹೆಸರು ನೆನಪಿನಲ್ಲಿರುವಂತೆ ಮಾಡಲಿದೆ ಎಂದರು.
ಸಮ್ಮೇಳನ ನಡೆಸುವ ಜಾಗದ ಆಯ್ಕೆಯಾದಲ್ಲಿ ಡೀಸಿ, ಎಸ್ಪಿಯವರ ಜಾವಾಬ್ದಾರಿ ಹೆಚ್ಚಾಗಿದೆ. ಸಮ್ಮೇಳನ ಯಶಸ್ವಿಗೆ ಆರ್ಥಿಕ ಸಹಾಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪಾತ್ರ ಅಪಾರವಾಗಿದೆ. ಸಣ್ಣ ಪುಟ್ಟ ವ್ಯತ್ಯಾಸ ಏನೇ ಇದ್ದರೂ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ್ ಜೋಷಿ ಸಹಕಾರ ನೆನೆಯಬೇಕು ಎಂದರು.ಸಮ್ಮೇಳನದಿಂದ ಉಳಿದ 2.20 ಹಣದ ಜೊತೆ ಜಿಲ್ಲೆಯ ಮೂರು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರವಿಕುಮಾರ, ರಮೇಶ್ ಬಾಬು ಅವರು ತಮ್ಮ ಅನುದಾನಗಳಲ್ಲಿ 3 ಕೋಟಿ ಅನುದಾನ ನೀಡಿದ್ದು, ಒಟ್ಟು 5.20 ಕೋಟಿ ಅನುದಾನದಲ್ಲಿ ಸರ್ ಎಂವಿ ಕ್ರೀಡಾಂಗಣದ ಪಕ್ಕ ಜಾಗದಲ್ಲಿ ಆದಷ್ಟು ಬೇಗ ಕನ್ನಡ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.
ಈ ಹಿಂದೆ ಶಾಸಕ, ಸಚಿವನಾಗಿ, ಸಂಸದನಾಗಿ ಮಾಡಿದ ಕೆಲಸದ ಜೊತೆಗೆ ಕೃಷಿ ಸಚಿವನಾಗಿ ಸಾಹಿತ್ಯ ಸಮ್ಮೇಳನ ನೇತೃತ್ವ ವಹಿಸಿ ಯಶಸ್ವಿಯಾಗಿ ನಡೆಸಿದ್ದು 3 ಪಟ್ಟು ಹೆಚ್ಚು ಸಂತೋಷ ತಂದು ಕೊಟ್ಟಿದೆ. ಈ ಸೌಭಾಗ್ಯ ಕೊನೆ ಉಸಿರು ಇರುವವರೆಗೂ ನೆನಪಿನಲ್ಲಿ ಉಳಿಯಲಿದೆ ಎಂದರು.