It is my responsibility to repay the debt of the votes: Minister Madhu Bangarappa
-ದೇವತಿಕೊಪ್ಪ ಮಾರ್ಗ ಹುಸಣಸೇಕಟ್ಟೆ ಸಂಪರ್ಕ ಕಲ್ಪಿಸುವ ₹ ೧ ಕೋ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ
--ಕನ್ನಡಪ್ರಭ ವಾರ್ತೆ ಸೊರಬ
ನಿಮ್ಮ ಒಂದು ಮತ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮತ್ತು ನನಗೆ ರಾಜಕಾರಣದಲ್ಲಿ ಉನ್ನತ ಸ್ಥಾನಕ್ಕೇರಿಸಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮ ಋಣ ಸಂದಾಯ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ನುಡಿದರು.ತಾಲೂಕಿನ ದೇವತಿಕೊಪ್ಪದಲ್ಲಿ ಉರಗನಹಳ್ಳಿ-ದೇವತಿಕೊಪ್ಪ ಸಂಪರ್ಕ ರಸ್ತೆ ಮತ್ತು ಹಿರಿಯಾವಲಿ ಕ್ರಾಸ್‌ನಿಂದ ದೇವತಿಕೊಪ್ಪ ಮಾರ್ಗವಾಗಿ ಹುಸಣಸೇಕಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ₹ ೧ ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನಿಮ್ಮ ಒಂದೊಂದು ಮತ ನಮ್ಮ ತಂದೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇಂದು ನಿಮ್ಮ ಮತ ನನ್ನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿದೆ. ಶಿಕ್ಷಣ ಇಲಾಖೆಯಲ್ಲಿ ೪೬ ಲಕ್ಷ ಮಕ್ಕಳು ಇದ್ದಾರೆ. ಅವರ ಭವಿಷ್ಯವನ್ನು ರೂಪಿಸುವ ಮಹತ್ವದ ಜವಾಬ್ದಾರಿ ನನ್ನ ಮೇಲಿದೆ. ರಾಜ್ಯದ ಸರ್ಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣದ ಕೇಂದ್ರಗಳನ್ನಾಗಿ ರೂಪಿಸುವ ಕೆಲಸ ನಡೆಯುತ್ತಿದೆ. ಕೆಪಿಎಸ್ ಶಾಲೆಗಳು ರಾಜ್ಯದ ಮಾದರಿ ಶಾಲೆಗಳಾಗಲಿವೆ. ಪ್ರತಿಯೊಂದು ಕೆಪಿಎಸ್ ಶಾಲೆಯಲ್ಲಿ ಸುಮಾರು ೧,೨೫೦ ಮಕ್ಕಳು ಕಲಿಯುವ ವ್ಯವಸ್ಥೆ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಬಸ್ ವ್ಯವಸ್ಥೆಯನ್ನೂ ಕಲ್ಪಿಸುವ ಉದ್ದೇಶವಿದೆ ಎಂದರು.ತಾಲೂಕಿನ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ, ಸಾಧ್ಯವಾದಷ್ಟು ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ₹ ೪೦೦ ಕೋಟಿ ಮೊತ್ತದ ಪ್ರಯೋಜನ ತಲುಪಿದೆ ಎಂದು ತಿಳಿಸಿದ ಅವರು, ಕ್ಷೇತ್ರದ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ ಸುಮಾರು ೫೦೦ ಹಳ್ಳಿಗಳಿದ್ದು, ಎಲ್ಲಾ ಗ್ರಾಮಗಳ ರಸ್ತೆಗಳನ್ನು ಒಂದೇ ಬಾರಿಗೆ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಪೂರ್ಣಗೊಳಿಸಿ ಗ್ರಾಮೀಣ ಪ್ರದೇಶದ ಜನರಿಗೆ ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದರು.ಇದೇ ವೇಳೆ ತಾಲೂಕಿನ ಕುಂಬತ್ತಿ ಗ್ರಾಮದಲ್ಲಿ ₹ ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಮಾವಲಿ-ಕಡಸೂರು ರಸ್ತೆ ಹಾಗೂ ಕುಂಬತ್ತಿಯಿಂದ ಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮತ್ತು ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಮಳಲಿಕೊಪ್ಪದಲ್ಲಿ ಉಳವಿ-ಸೊರಬ ಮುಖ್ಯ ರಸ್ತೆಯಿಂದ ಹಾಲಗಳಲೆ-ಇಂಡುವಳ್ಳಿ-ಮಳಲಿಕೊಪ್ಪ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ. ಪುರಂದರ, ತಾ.ಪಂ. ಇಒ ಶಶಿಧರ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ತಾ.ಪಂ. ಮಾಜಿ ಅಧ್ಯಕ್ಷ ಹೆಚ್. ಗಣಪತಿ, ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಇದ್ದರು.
-----ಫೋಟೊ:೦೪ಕೆಪಿಸೊರಬ-೦೧
ಸೊರಬ ತಾಲೂಕಿನ ದೇವತಿಕೊಪ್ಪ ಗ್ರಾಮದಲ್ಲಿ ₹೧ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.