ಸಾರಾಂಶ
ಡಂಬಳ: ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಭಾವೈಕ್ಯತೆ ಭಾವ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ಡಂಬಳ-ಗದಗನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಡಂಬಳ ಗ್ರಾಮದ ಜಗದ್ಗುರು ತೋಂಟದಾರ್ಯ ಮಠದ ಲಘು ರಥೋತ್ಸವದ ನಿಮಿತ್ತ ಭಾನುವಾರ ರಾತ್ರಿ ಜರುಗಿದ ರೊಟ್ಟಿ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಮ್ಮ ದೇಶ ಹಲವು ಜಾತಿ, ಹಲವು ಭಾಷೆ ಉಳ್ಳವರಿಂದ ಕೂಡಿದ್ದು, ಪ್ರತಿಯೊಬ್ಬರೂ ಜಾತಿ, ಮತ, ಪಂಥ ಎನ್ನದೆ ಸೌಹಾರ್ದಯುತವಾಗಿ ಬಾಳಬೇಕು. ಭಾರತ ಬಹುತ್ವದಿಂದ ಕೂಡಿದ ದೇಶವಾಗಿದೆ. ಆದ್ದರಿಂದ ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ, ಭಾವೈಕ್ಯತೆಯಿಂದ ಬಾಳಬೇಕು ಎಂದು ಕರೆ ನೀಡಿದರು.ವೈರಿಯು ನಮ್ಮ ಒಳ್ಳೆಯ ಗುಣಗಳನ್ನು ಮೆಚ್ಚುವ ರೀತಿ ನಾವು ಬದುಕಬೇಕು. ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಆದರ್ಶಗಳು ನಮ್ಮ ಬದುಕಿಗೆ ದಾರಿ ತೋರುತ್ತವೆ. ಅವರ ಆದರ್ಶ ಪಾಲಿಸಿದರೆ ಶ್ರೀಗಳಿಗೆ ನಾವು ಸಲ್ಲಿಸುವ ಕಾಣಿಕೆ ಎಂದು ಹೇಳಿದರು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉತ್ತಮ ಭವಿಷ್ಯ ನಿರ್ಮಾಣಕ್ಕೆ ಶಿಕ್ಷಣ ಅವಶ್ಯ. ಜ್ಞಾನವೇ ಶಕ್ತಿಯಾಗಿದ್ದು, ಉತ್ತಮ ನಾಗರಿಕನಾಗಲು ಶಿಕ್ಷಣ ಅತ್ಯವಶ್ಯ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು. ಪರಿಸರ ರಕ್ಷಣೆ ಮಾಡುವ ಕಾರ್ಯ ಆಗಬೇಕು. ಶ್ರೀಮಠದ ಜಾತ್ರೆಯು ಭಾವೈಕ್ಯತೆಯ ಜಾತ್ರೆಯಾಗಿದೆ ಎಂದರು.
ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಜಗದ್ಗುರು ತೋಂಟದಾರ್ಯ ಮಠದ ಜಾತ್ರೆ ಅತ್ಯಂತ ವಿಶೇಷವಾದುದು. ಭಾವೈಕ್ಯದಿಂದ ಎಲ್ಲರೂ ಸೇರಿ ರೊಟ್ಟಿ ಜಾತ್ರೆ ಆಚರಣೆ ಮಾಡಲಾಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಶ್ರಮಿಸಿದರು. ಅವರಂತೆ ಲಿಂ. ಡಾ. ತೋಂಟದಸಿದ್ಧಲಿಂಗ ಶ್ರೀಗಳು ಸಮಾನತೆಗಾಗಿ, ಜ್ಞಾನಕ್ಕೆ, ಶಿಕ್ಷಣಕ್ಕಾಗಿ ಅತ್ಯುತ್ತಮ ಕೆಲಸ ಮಾಡಿದರು ಎಂದರು.ಮಾಜಿ ಸಚಿವ ಎಸ್.ಎಸ್. ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರೊಟ್ಟಿ ಜಾತ್ರೆಯಲ್ಲಿ ಭಕ್ತರು ರೊಟ್ಟಿ, ಕರಿಂಡಿ, ಬಾನ, ಪುಂಡಿಪಲ್ಲೆ, ಅಗಸಿಚಟ್ನಿ ಪ್ರಸಾದ ಸವಿದರು.
ಸಿಂಹಾಸನಾರೂಢ ಸ್ವಾಮೀಜಿ, ಜಿ.ವಿ. ಹಿರೇಮಠ, ಶಿವಕುಮಾರ ಪ್ಯಾಟಿ, ಎಂ.ಎಸ್. ಅಂಗಡಿ, ಜಿ.ಬಿ. ಪಾಟೀಲ, ಎಸ್.ಎಸ್. ಕಳಸಾಪುರ, ಮಹಾಂತೇಶ ಎಂ., ಯಲ್ಲಪ್ಪ, ಜಿ.ವಿ. ಹಿರೇಮಠ, ವಿ.ಎಸ್. ಯರಾಶಿ, ವಿರೂಪಾಕ್ಷಪ್ಪ ಲಕ್ಕುಂಡಿ, ಮರಿತೇಮಪ್ಪ ಆದಮ್ಮನವರ, ಜಾತ್ರಾ ಸಮಿತಿ ಅಧ್ಯಕ್ಷ ಬಸವರಾಜ ಹಮ್ಮಿಗಿ, ಭೀಮಪ್ಪ ಗದಗಿನ, ಅಶೋಕ ಮಾನೆ, ಮಲ್ಲಣ್ಣ ರೇವಡಿ ಇತರರು ಇದ್ದರು. ಮುತ್ತಣ್ಣ ಕೊಂತಿಕಲ್ಲ ಸ್ವಾಗತಿಸಿದರು. ಕೆ.ಬಿ. ಕಂಬಳಿ ಕಾರ್ಯಕ್ರಮ ನಿರೂಪಿಸಿದರು.