ಸಾರಾಂಶ
ಮನುಷ್ಯ ಐಷಾರಾಮಿ ಜೀವನಕ್ಕೆ ಮಾರುಹೋಗಿ ಪರಿಸರ ನಾಶಕ್ಕೆ ಮುಂದಾಗುತ್ತಿದ್ದಾನೆ. ಅಗತ್ಯಕ್ಕಿಂತ ಹೆಚ್ಚಾಗಿ ಯಾವುದೇ ವಸ್ತುಗಳನ್ನು ಬಳಸಿದರೂ ಅದರಿಂದ ಪರಿಸರಕ್ಕೆ ಹಾನಿಯಾಗುವುದು ಖಚಿತ ಎಂದು ಆದರ್ಶ ಶಿಕ್ಷಣ ಸಮಿತಿಯ ಚೇರ್‌ಮನ್ ಆನಂದ್ ಎಲ್. ಪೊತ್ನೀಸ್ ಹೇಳಿದರು.
ಗದಗ: ಗಿಡ, ಮರಗಳ ನಾಶದಿಂದ ಪರಿಸರಕ್ಕೆ ಹಾನಿ ಆಗುವ ಬಗ್ಗೆ ಮಕ್ಕಳಿಂದಲೆ ಜಾಗೃತಿ ಮೂಡಿಸುವುದು ಭವಿಷ್ಯಕ್ಕೆ ಒಳ್ಳೆಯದು. ಈ ಸಂಬಂಧ ಶಿಕ್ಷಕರು ಮರ, ಗಿಡ ಪ್ರಕೃತಿ ಬಗ್ಗೆ ಮಕ್ಕಳಿಗೆ ಹೆಚ್ಚು ತಿಳಿವಳಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಆದರ್ಶ ಶಿಕ್ಷಣ ಸಮಿತಿಯ ಚೇರ್‌ಮನ್ ಆನಂದ್ ಎಲ್. ಪೊತ್ನೀಸ್ ಹೇಳಿದರು.
ನಗರದ ಆದರ್ಶ ಶಿಕ್ಷಣ ಸಮಿತಿಯ ಡಿ.ಎಸ್. ಕುರ್ತಕೋಟಿ ಮೆಮೋರಿಯಲ್ ಪಪೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಎಚ್.ಡಿ.ಎಫ್.ಸಿ. ಬ್ಯಾಂಕ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಪ್ರತಿಯೊಬ್ಬ ಪ್ರಜೆಯು ಪರಿಸರದ ಬಗ್ಗೆ ಕಾಳಜಿ ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ವೈಯಕ್ತಿಕ ಐಷಾರಾಮಿ ಜೀವನಕ್ಕೆ ಮಾರುಹೋಗಿ ದುರಾಸೆಯಿಂದ ಪರಿಸರ ನಾಶಕ್ಕೆ ಮುಂದಾಗುತ್ತಿದ್ದಾನೆ. ಅಗತ್ಯಕ್ಕಿಂತ ಹೆಚ್ಚಾಗಿ ಯಾವುದೇ ವಸ್ತುಗಳನ್ನು ಬಳಸಿದರೂ ಅದರಿಂದ ಪರಿಸರಕ್ಕೆ ಹಾನಿಯಾಗುವುದು ಖಚಿತ. ಹಿಂದಿನವರು ಯೋಚಿಸಿ ರಸ್ತೆ ಬದಿಗಳಲ್ಲಿ ಮರ ಗಿಡಗಳನ್ನು ನೆಟ್ಟು ರಕ್ಷಿಸಿರುವುದು ಇಂದು ನಮ್ಮ ಕಣ್ಣ ಮುಂದಿದೆ. ಅವು ಹೆಮ್ಮರವಾಗಿ ಮನುಷ್ಯನಿಗೆ ಉಪಯೋಗವಾಗಿವೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಒಂದೊಂದು ಗಿಡನೆಟ್ಟು ಬೆಳೆಸುವ ಮೂಲಕ ಪ್ರಕೃತಿಗೆ ತಮ್ಮ ಅಳಿಲು ಸೇವೆ ಸಲ್ಲಿಸಬೇಕು ಎಂದರು.ಈ ವೇಳೆ ಸಮಿತಿಯ ಕಾರ್ಯದರ್ಶಿ ಆನಂದ ಡಿ. ಗೋಡಖಿಂಡಿ, ಪ್ರಾಚಾರ್ಯ ಆರ್.ಆರ್. ಕುಲಕರ್ಣಿ, ಬ್ಯಾಂಕ್ ಆಪರೇಷನ್ ಮ್ಯಾನೇಜರ್ ಪ್ರವೀಣ್ ಬೆಳವನಕರ್, ಬ್ಯಾಂಕ್ ಮ್ಯಾನೇಜರ್ ಮಾರುತಿ ಮುಂಡರಗಿ, ಆದಿತ್ಯ ಜೋಶಿ, ಬಸವರಾಜ ಟಿ.ಪಿ., ಅಕ್ಷತಾ ಏಳೂರ, ನೇತ್ರಾ ಡಿ. ಇದ್ದರು.