ಸಾರಾಂಶ
ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿ ರಕ್ತನಿಧಿ ಸಹಯೋಗದೊಂದಿಗೆ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ರಕ್ತ ಅಂದರೆ ಜೀವ. ರಕ್ತದಾನ ಮಾಡುವುದರಿಂದ ಜೀವನಾದನವೂ ಆಗುತ್ತದೆ. ದಾನ ಮಾಡಿದವರ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಆದ್ದರಿಂದ ಯುವಜನರಿಗೆ ರಕ್ತದಾನದ ಮಹತ್ವವನ್ನು ತಿಳಿಸಿ ಅವರಲ್ಲಿ ರಕ್ತದಾನದ ಪ್ರಜ್ಞೆಯನ್ನು ಬೆಳೆಸಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ ಕರಾವಳಿ ಅಧ್ಯಕ್ಷ ಡಾ.ಸುರೇಶ್ ಶೆಣೈ ಹೇಳಿದ್ದಾರೆ.ಅವರು ಮಂಗಳವಾರ ಉಡುಪಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಮತ್ತು ಮಣಿಪಾಲ ಕೆಎಂಸಿ ರಕ್ತನಿಧಿ ಸಹಯೋಗದೊಂದಿಗೆ ಉಡುಪಿ ಜಾಮೀಯ ಮಸೀದಿ ವಠಾರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಕೆಎಂಸಿ ಬ್ಲಡ್ ಸೆಂಟರ್‌ನ ಮುಖ್ಯಸ್ಥೆ ಡಾ.ಶಮೀ ಶಾಸ್ತ್ರಿ ಮಾತನಾಡಿ, ರಕ್ತದಾನ ಎಂಬುದು ಪುಣ್ಯದ ಕೆಲಸ. ಒಬ್ಬ ರಕ್ತದಾನ ಮಾಡುವುದರಿಂದ 3-4 ಮಂದಿಯ ಜೀವ ಉಳಿಸಬಹುದಾಗಿದೆ. ಪ್ರತಿದಿನ ನಮ್ಮ ಕೇಂದ್ರದಲ್ಲಿ 100-150 ಮಂದಿಗೆ ರಕ್ತ ಬೇಕಾಗುತ್ತದೆ. ಆದರೆ ಕೇವಲ 10- 15 ಮಂದಿ ಮಾತ್ರ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಾರೆ. ಇದರಿಂದ ರಕ್ತದ ಕೊರತೆ ಬಹಳ ಇದೆ. ಅದೇ ರೀತಿ ರಕ್ತದಾನ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಯನ್ನು ಕೂಡ ದೂರ ಮಾಡಬೇಕಾಗಿದೆ ಎಂದರು.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ ಮಾತನಾಡಿ, ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರಿದರೂ ಈವರೆಗೆ ರಕ್ತಕ್ಕೆ ಪರ್ಯಾಯವಾಗಿ ಕೃತಕ ರಕ್ತವನ್ನು ಸೃಷ್ಠಿ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಮನುಷ್ಯ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಮಾತ್ರ ಈ ಕೊರತೆ ನಿಗೀಸಲು ಸಾಧ್ಯ. ರಕ್ತದಾನ ಎಂಬುದು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದು ಅಭಿಪ್ರಾಯಪಟ್ಟರು.ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮ್ಮದ್, ಸಾಮಾಜಿಕ ಕಾರ್ಯಕರ್ತ ಮುನೀರ್ ಕಲ್ಮಾಡಿ ಮುಖ್ಯ ಅತಿಥಿಗಳಾಗಿದ್ದರು. ಅಸೋಸಿಯೇಶನ್ ಅಧ್ಯಕ್ಷ ಮುನೀರ್ ಮುಹಮ್ಮದ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ರಿಯಾಝ್ ಕುಕ್ಕಿಕಟ್ಟೆ ಕಿರಾತ್ ಪಠಿಸಿ, ವಂದಿಸಿದರು. ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿದರು.