ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸುವುದು ಅವಶ್ಯ

| Published : Sep 11 2024, 01:08 AM IST

ಸಾರಾಂಶ

ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಹಾಗೂ ಪಾಲಕರ ಸಹಭಾಗಿತ್ವ ಅತ್ಯಂತ ಅವಶ್ಯ

ಮುಂಡರಗಿ: ಶಾಲೆಗಳಲ್ಲಿ ಮಕ್ಕಳಿಗೆ ಪಾಠದಷ್ಟೇ ಆಟಗಳೂ ಮುಖ್ಯ. ಆದ್ದರಿಂದ ಶಾಲಾ ಹಂತದಲ್ಲಿ ಮಕ್ಕಳಲ್ಲಿ ಕ್ರೀಡಾಸಕ್ತಿ ಮೂಡಿಸುವುದು ಅವಶ್ಯವಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ಎಸ್.ಎಂ. ಭೂಮರಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಪಂ ಗದಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಡರಗಿ ಆಶ್ರಯದಲ್ಲಿ ಜರುಗಿದ 2024-25ನೇ ಸಾಲಿನ ಮುಂಡರಗಿ ಪೂರ್ವ ವಲಯದ ಗ್ರುಪ್ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಉದ್ಘಾಟಿಸಿ ಮಾತನಾಡಿದರು.

ಇಲ್ಲಿ ಜರುಗುತ್ತಿರುವ ಕ್ರೀಡಾಕೂಟದಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುವುದರಿಂದ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸುವ ಎಲ್ಲ ಶಿಕ್ಷಕರು ಪ್ರಾಮಾಣಿಕವಾಗಿ ನಿರ್ಣಯ ಕೊಡುವ ಮೂಲಕ ಇಲ್ಲಿನ ಮಗು ರಾಜ್ಯ ಮತ್ತು ದೇಶ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಶಾಲೆಗಳೆಂದರೆ ದೇವಾಲಯಗಳಿದ್ದಂತೆ. ಇಲ್ಲಿರುವ ಮಕ್ಕಳು ಜೀವಂತ ದೇವರು. ಹೀಗಾಗಿ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಈ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರ ಹಾಗೂ ಪಾಲಕರ ಸಹಭಾಗಿತ್ವ ಅತ್ಯಂತ ಅವಶ್ಯವಾಗಿದ್ದು, ಅಂತಹ ಪ್ರೋತ್ಸಾಹದಿಂದಲೇ ಈ ಶಾಲೆ ಸುಂದರ ಶಾಲೆಯಾಗಿ ರೂಪಗೊಳ್ಳುವ ಮೂಲಕ ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗುವಂತಿದೆ ಎಂದರು.

ಬಾಲಕರ ಹಾಗೂ ಬಾಲಕಿಯಕ ಕ್ರೀಡಾಕೂಟ ಉದ್ಘಾಟಿಸಿ ಎಂಪಿಎಂ ಮಾಜಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಮಕ್ಕಳಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಅಷ್ಟೇ ಅವಶ್ಯವಾಗಿವೆ.ಹೀಗಾಗಿ ಮಕ್ಕಳು ಪಾಠದಷ್ಟೇ ಆಟಕ್ಕೂ ಸಹ ಮಹತ್ವ ನೀಡಬೇಕು. ಕ್ರೀಡೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗುವುದರಿಂದ ಶಾಲೆಯ ಕೀರ್ತಿ ಹೆಚ್ಚಿಸುವುದರ ಜತೆಗೆ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಪುರಸಭೆ ಅಧ್ಯಕ್ಷ ನಿರ್ಮಲಾ ಕೊರ್ಲಹಳ್ಳಿ ಕ್ರೀಡಾಕೂಟ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಶಾಲಾ ಎಸ್.ಡಿಎಂ.ಸಿ. ಅಧ್ಯಕ್ಷ ವಿರುಪಾಕ್ಷಪ್ಪ ಬಾರಕೇರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬಿಇಓ ಎಚ್.ಎಂ. ಪಡ್ನೇಶಿ, ಪುರಸಭೆ ಮಾಜಿ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ, ರಮೇಶ ಭೂಮರಡ್ಡಿ, ವಿಜಯಕುಮಾರ ಶಿಳ್ಳೀನ, ದುರಗಪ್ಪ ರಾಮೇನಹಳ್ಳಿ, ಸುನಂದಾ ಸಜ್ಜನರ, ಅಶೋಕ ಹಂದ್ರಾಳ, ವೀರಣ್ಣ ಮಡಿವಾಳರ, ಡಾ.ಮಂಗಳಾ ಇಟಗಿ, ರವೀಂದ್ರಗೌಡ ಪಾಟೀಲ, ರಂಗಪ್ಪ ಕೋಳಿ, ಡಿ.ಜಿ. ಪೂಜಾರ, ದೈಹಿಕ ಶಿಕ್ಷಣಾಧಿಕಾರಿ ಬಸಣ್ಣೆಪ್ಪ ಜಿ.ಬಿ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಿಆರ್‌ಪಿ ಎಸ್.ಡಿ. ಬಸೇಗೌಡ್ರ ಸ್ವಾಗತಿಸಿ, ಗಂಗಾಧರ ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಪಿ. ಶೀರನಹಳ್ಳಿ ನಿರೂಪಿಸಿ, ಬಿ.ಕೆ.ಮಾದರ ವಂದಿಸಿದರು.