ಚಿಕ್ಕಮಗಳೂರುಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಪಠ್ಯದ ಜತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ। ತಾಲೂಕು ದಸರಾ ಕ್ರೀಡಾಕೂಟ, ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಪಠ್ಯದ ಜತೆಗೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಚಿಕ್ಕಮಗಳೂರು ತಾಲೂಕು ದಸರಾ ಕ್ರೀಡಾಕೂಟ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಮಾತನಾಡಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಆರೋಗ್ಯ ವೃದ್ಧಿಸುವುದಲ್ಲದೆ ದೈಹಿಕವಾಗಿಯೂ ಗಟ್ಟಿಯಾಗಲು ಸಾಧ್ಯ. ಕ್ರೀಡಾಪಟು ಗಳು ಉನ್ನತ ಮಟ್ಟದ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸೋತವರು ಎಂದಿಗೂ ಕುಗ್ಗಬಾರದು, ಗೆದ್ದವರು ಹಿಗ್ಗದೆ ಮುಂದಿನ ಹಂತದ ಸಾಧನೆಗೆ ಶ್ರಮಿಸಬೇಕು ಎಂದರು.ತೀರ್ಪುಗಾರರು ಯಾವುದೇ ಪಕ್ಷಪಾತವಿಲ್ಲದೆ ಪ್ರಾಮಾಣಿಕ ತೀರ್ಪು ನೀಡಿ ಕ್ರೀಡೆ ಘನತೆ ಎತ್ತಿಹಿಡಿಯಬೇಕು ಎಂದು ಮನವಿ ಮಾಡಿದರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ಕ್ರೀಡಾಪಟುಗಳು ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಉನ್ನತವಾದ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಮೈಸೂರು ದಸರಾ ಕ್ರೀಡಾಕೂಟದ ಸುದೀರ್ಘ ಪರಂಪರೆ ಹಾಗೂ ನೆನಪನ್ನು ಉಳಿಸಿಕೊಂಡು ಹೋಗಲು ರಾಜ್ಯಾದ್ಯಂತ ಇಂತಹ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜರ ಕಾಲದಿಂದಲೂ ಕ್ರೀಡೆ ಮತ್ತು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಥ್ಲೆಟಿಕ್ಸ್‌ನಿಂದ ಹಿಡಿದು ಕುಸ್ತಿವರೆಗೆ ಹಲವು ಸ್ಪರ್ಧೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ದಸರಾ ಕ್ರೀಡಾಕೂಟದಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲದೆ, ಶಾಲಾ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಭಾಗವಹಿಸಲು ಅವಕಾಶವಿದೆ. ಕ್ರೀಡೆಯಲ್ಲಿ ಭಾಗವಹಿಸುವುದೇ ಮುಖ್ಯ. ಸೋತವರು ಕುಗ್ಗದೆ, ಗೆದ್ದವರು ಬೀಗದೆ ನಿರಂತರ ಪರಿಶ್ರಮ ವಹಿಸಬೇಕು. ಕ್ರೀಡಾ ಮನೋಭಾವವೇ ಪ್ರತಿಯೊಬ್ಬ ಕ್ರೀಡಾಪಟುವಿನ ನೈಜ ಶಕ್ತಿ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ ದೇಹ ಮತ್ತು ಮನಸ್ಸಿನ ಆರೋಗ್ಯ ಸದಾ ಕಾಯ್ದು ಕೊಳ್ಳಲು ಕ್ರೀಡೆಗಳು ಅತ್ಯಂತ ಅವಶ್ಯಕ. ಸಮಾಜದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಮಾತ್ರವೇ ಸ್ವಾಸ್ಥ್ಯ ಹಾಗೂ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದರು.
ಮನುಷ್ಯನ ಶಾರೀರಿಕ ದೃಢತೆ ಹಾಗೂ ಮಾನಸಿಕ ನೆಮ್ಮದಿಗೆ ಕ್ರೀಡಾ ಚಟುವಟಿಕೆಗಳು ಪ್ರಮುಖ ಚಾಲಕ ಶಕ್ತಿ. ಮನಸ್ಸಿನ ಪ್ರತಿಯೊಂದು ಚಟುವಟಿಕೆಯೂ ಸಕಾರಾತ್ಮಕ ಹಾಗೂ ಆರೋಗ್ಯಕರವಾಗಿ ಇರಬೇಕಾದರೆ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿ ಸಿಕೊಳ್ಳಬೇಕು. ಆರೋಗ್ಯವಂತ ನಾಗರಿಕರಿಂದಷ್ಟೇ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಕ್ರೀಡೆಯು ಒಂದು ಮಹತ್ತರ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಬಾಲ್ ಬ್ಯಾಡ್ಮಿಂಟನ್ ಸಂಘದ ಅಧ್ಯಕ್ಷ ಸುಂದರೇಶ್, ಪುನೀತ್, ಸಂತೋಷ್ ಮೊದಲಾದವರಿದ್ದರು.