ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವುದು ಅವಶ್ಯ: ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ

| Published : Mar 12 2024, 02:03 AM IST

ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವುದು ಅವಶ್ಯ: ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನ ವಿರೂಪಾಪುರ- ಕಲಕೇರಿ ಗ್ರಾಮದಲ್ಲಿ ಶ್ರೀ ಮುದುಕೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವದಲ್ಲಿ ಬನ್ನಿಕೊಪ್ಪ ಹಾಗೂ ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಗುರುಪದೇಶ ನೀಡಿದರು.

ಮುಂಡರಗಿ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ದೇವರು, ಧರ್ಮ, ಆಚಾರ-ವಿಚಾರಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು,‌ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವುದು ಅವಶ್ಯವಾಗಿದೆ ಎಂದು ಬನ್ನಿಕೊಪ್ಪ ಹಾಗೂ ಮೈಸೂರಿನ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ವಿರೂಪಾಪುರ- ಕಲಕೇರಿ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಮುದುಕೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವ ಕಾರ್ಯಕ್ರಮದಲ್ಲಿ ಗುರುಪದೇಶ ನೀಡಿ ಮಾತನಾಡಿ, ನಾವಿಂದು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡಬೇಕೆಂದರೆ ಅವರಿಗೆ ಶ್ರೀಗಳ ಮಾತುಗಳನ್ನು ಕೇಳಿಸುವ ಜತೆಗೆ ಮಠಗಳು ಮತ್ತು ಧರ್ಮಗಳ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಜ. ಬಸವರಾಜ ಸ್ವಾಮೀಜಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪರೀಕ್ಷೆಯ ಅಂಕಗಳಿಗೆ ಮಹತ್ವ ಕೊಡುವಂತದ್ದಲ್ಲ, ಮಾನವೀಯತೆ ಮತ್ತು ಮನುಷ್ಯತ್ವವನ್ನು ಅರಿತು ನಡೆಯಬೇಕು. ಅದು ನಿಜವಾದ ಶಿಕ್ಷಣ. ಮಕ್ಕಳಿಗೆ ತಂದೆ-ತಾಯಂದಿರು ಸಂಸ್ಕೃತಿ, ಸಂಸ್ಕಾರದ ಜತೆಗೆ ಜೀವನಾನುಭವದ ಪಾಠಗಳನ್ನು ಹೇಳಿಕೊಡಬೇಕು. ಇಂತಹ ಗ್ರಾಮೀಣ ಪ್ರದೇಶದ ಜಾತ್ರಾ ಮಹೋತ್ಸವಗಳಿಗೆ ಮಕ್ಕಳನ್ನು ಕರೆತಂದರೆ ಅವರಿಗೆ ಹಳ್ಳಿ ಸೊಗಡಿನ ಪರಿಚಯ ಮಾಡಿದಂತಾಗುತ್ತದೆ ಎಂದರು.

ಮುಂಡರಗಿ ಜ. ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ವಿರೂಪಾಪುರ -ಕಲಕೇರಿ ಜಾತ್ರಾ ಮಹೋತ್ಸವ ಶತಮಾನ ಕಂಡಿದ್ದು, ಇಲ್ಲಿನ ಶ್ರೀಗುರು ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವಿರೂಪಾಪುರ ಹಾಗೂ ಕಲಕೇರಿ ಭಕ್ತರು ಜಾತ್ರಾ ಮಹೋತ್ಸವವನ್ನೂ ವರ್ಷದಿಂದ ವರ್ಷಕ್ಕೆ ಅದ್ಧೂರಿಯಾಗಿ ಮಾಡುತ್ತಿದ್ದು, ಇಂತಹ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಒಳ್ಳೆಯ ಮಾತುಗಳನ್ನು ಕೇಳಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕು ಎಂದರು.

ವಿರೂಪಾಪುರ ಕಲಕೇರಿ ಮಠದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಮಠವು ಒಂದು ಶತಮಾನವನ್ನು ಪೂರೈಸಿ ಇದೀಗ 103ನೇ ಜಾತ್ರಾ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವ ಸಂಭ್ರಮ-ಸಡಗರದಿಂದ ನಡೆಸುತ್ತಿದೆ ಎಂದರು.

ಮುಂಡರಗಿಯ ಹನುಮರೆಡ್ಡಿ ಇಟಗಿ ಮಾತನಾಡಿದರು. ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಕರಬಸಪ್ಪ ಹಂಚಿನಾಳ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು.

ಮೈನಳ್ಳಿ ಬಿಕನಹಳ್ಳಿಯ ಸಿದ್ದೇಶ್ವರ ಸ್ವಾಮೀಜಿ, ಪಾಲಾಕ್ಷಗೌಡ ಪಾಟೀಲ, ಶಿವನಗೌಡ ಡೋಣಿ, ಸುಭಾಸರಡ್ಡಿ ಉಪಸ್ಥಿತರಿದ್ದರು. ಗವಿಸಿದ್ದಯ್ಯ ಹಿರೇಮಠ ಸ್ವಾಗತಿಸಿದರು. ಯಂಕಣ್ಣ ಯಕ್ಲಾಸಪುರ ಕಾರ್ಯಕ್ರಮ ನಿರೂಪಿದರು.