ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಮಕ್ಕಳಲ್ಲಿ ಸೃಜನಶೀಲ ಆಲೋಚನೆಯನ್ನು ಬೆಳೆಸುವ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ವೃದ್ಧಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.ಇಲ್ಲಿನ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕನ್ನಡ ಜಾಗೃತ ಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಗಳು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಉನ್ನತ ಸಾಧನೆಗೆ ಪ್ರೇರಣೆ ಹಾಗೂ ಮಾರ್ಗದರ್ಶನ ಒದಗಿಸುವ ಪ್ರಕ್ರಿಯೆ ಗಣನೀಯ. ಪುರಸ್ಕಾರಗಳು ಹೆಚ್ಚಿನ ಸಾಧನೆಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ವೇದಿಕೆಗಳಾಗಬೇಕು ಎಂದು ಹೇಳಿದರು.
ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ಮಕ್ಕಳು ಖಿನ್ನತೆಗೆ ಒಳಗಾಗದಂತೆ ಪೋಷಕರು ನಿಗಾ ವಹಿಸಬೇಕು. ಓದಿನ ಜೊತೆ ಆತ್ಮವಿಶ್ವಾಸ ಹೆಚ್ಚಿಸುವ ಅಗತ್ಯವಿದೆ. ಮಕ್ಕಳಲ್ಲಿ ಮೊಬೈಲ್ ಗೀಳು ಬಿಡಿಸಿ, ಓದುವ ಹವ್ಯಾಸ ಬೆಳೆಸಬೇಕು. ಆರೋಗ್ಯಕರ ಚಿಂತನಾ ಲಹರಿಯನ್ನು ಮಕ್ಕಳು ಆಲೋಚಿಸುವಂತೆ ಮಾಡುವ ಹೊಣೆ ಪೋಷಕರ ಮೇಲಿದೆ. ಧನಾತ್ಮಕ ಆಲೋಚನೆಗಳನ್ನು ಬಿತ್ತುವ ಮೂಲಕ ಸಾಧನೆಗೆ ಪ್ರೇರಣೆ ಒದಗಿಸಬೇಕು ಎಂದು ತಿಳಿಸಿದರು.ಬೆಂ.ಗ್ರಾ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬೆಳೆಸದ ಶಿಕ್ಷಣ ಅರ್ಥಹೀನ. ಅಂಕಗಳ ಜೊತೆಗೆ ಮನುಷ್ಯ ಸಂವೇದನೆಯನ್ನು ರೂಢಿಸಿಕೊಂಡ ವ್ಯಕ್ತಿ ಸಾಧಕನಾಗಿ ಹೊರಹೊಮ್ಮುತ್ತಾನೆ. ಕನ್ನಡದ ಮೂಲಕ ಸಾಧಿಸುವ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವುದು ಅಗತ್ಯ. ಇಂದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳಿಗೂ ಹೆಚ್ಚಿನ ಅವಕಾಶಗಳಿದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಆರಕ್ಷಕ ನಿರೀಕ್ಷಕ ಡಾ.ನವೀನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಶೈಕ್ಷಣಿಕ ಬೆಳವಣಿಗೆಗೆ ಪರಿಶ್ರಮ, ಆಸಕ್ತಿ ಮತ್ತು ಸಾಧನೆಯ ಹಂಬಲಗಳು ಮೆಟ್ಟಿಲುಗಳಾಗಿರಬೇಕು. ಯಶಸ್ಸು ಎಂದಿಗೂ ಸೋಮಾರಿಯ ಸ್ವತ್ತಲ್ಲ. ಪರಿಶ್ರಮಿಯಾದವನು ಮಾತ್ರ ಸುಖಿಯಾಗಿರಲು ಸಾಧ್ಯ ಎಂಬ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಶ್ರಮ ಹಾಕಿ ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.ನಗರಠಾಣೆ ಆರಕ್ಷಕ ನಿರೀಕ್ಷಕ ಅಮರೇಶ್‌ಗೌಡ ಮಾತನಾಡಿ, ಹದಿಹರೆಯದ ವಯೋಮಾನದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳಿದ್ದು, ಎಚ್ಚರದಿಂದ ಇರಬೇಕು. ಈ ಹಂತದಲ್ಲಿ ಪ್ರಜ್ಞಾಪೂರ್ವಕವಾಗಿ ಬದುಕನ್ನು ರೂಢಿಸಿಕೊಂಡರೆ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ:ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳು, ಕನ್ನಡ ಭಾಷಾ ವಿಷಯ ಹಾಗೂ ಕನ್ನಡ ಮಾಧ್ಯಮದಲ್ಲಿ ಹೆಚ್ಚಿನ ಅಂಕಗಳಿಸಿದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪವಾಡ ಭಂಜಕ ಹುಲಿಕಲ್ ನಟರಾಜ್ ಅವರಿಗೆ ಕೊಂಗಾಡಿಯಪ್ಪ ಪ್ರಶಸ್ತಿ, ಛಾಯಾಗ್ರಾಹಕ ಎಚ್.ಎಸ್.ನಾಗೇಶ್, ಸಾಹಿತಿ ಪ್ರೊ.ರವಿಕಿರಣ್.ಕೆ.ಆರ್ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಹಿರಿಯ ಕಲಾವಿದ ಜವಾಜಿ ಸೀತಾರಾಮ್ ಅವರಿಗೆ ಸಂತಾಪ ಸಲ್ಲಿಸಲಾಯಿತು.
ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ರಾಜಶೇಖರ್, ಕರವೇ ಕಾನೂನು ಘಟಕದ ರಾಜ್ಯಾಧ್ಯಕ್ಷ ಸುಭಾಶ್‌ಚಂದ್ರ, ಸಹ್ಯಾದ್ರಿ ಆಸ್ಪತ್ರೆಯ ಸಿಇಒ ಜಗದೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಸಂಘಟನಾ ಕಾರ್ಯದರ್ಶಿ ಅರವಿಂದ್, ತಾಲೂಕು ಅಧ್ಯಕ್ಷ ವಿನಯಾರಾಧ್ಯ, ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್‌ಗೌಡ, ಮಹಿಳಾ ಅಧ್ಯಕ್ಷೆ ರಾಧಾಮಣಿ, ತಾ.ಕಾರ್ಯಾಧ್ಯಕ್ಷ ಪ್ರದೀಪ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಾನಂದ್, ಕಾರ್ಯದರ್ಶಿ ಉದಯಕುಮಾರ್, ಮುಖಂಡ ವಾಸು ಮತ್ತಿತರರು ಭಾಗವಹಿಸಿದ್ದರು.5ಕೆಡಿಬಿಪಿ4-
ದೊಡ್ಡಬಳ್ಳಾಪುರದಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸದಸ್ಯ ಹುಲಿಕಲ್ ನಟರಾಜ್ ಅವರಿಗೆ ಕೊಂಗಾಡಿಯಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.