ತೊಗಲುಗೊಂಬೆ ಕಲಾ ಪ್ರಕಾರದ ಬೆಳವಣಿಗೆಗೆ ಅಗತ್ಯ ಸಹಕಾರ ನೀಡಲು ಭಾರತೀಯ ವೈದ್ಯಕೀಯ ಸಂಘ ಸಿದ್ಧವಿದೆ ಎಂದು ಐಎಂಎ ಕರ್ನಾಟಕ ಶಾಖೆಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಿರುಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರು ತಿಳಿಸಿದರು.

ಬಳ್ಳಾರಿ: ಜನಪದ ಕಲೆಗಳ ಪೈಕಿ ವಿಶೇಷ ಸ್ಥಾನ ಹೊಂದಿರುವ ತೊಗಲುಗೊಂಬೆ ಕಲೆಯನ್ನು ಉತ್ತೇಜಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ತೊಗಲುಗೊಂಬೆ ಕಲಾ ಪ್ರಕಾರದ ಬೆಳವಣಿಗೆಗೆ ಅಗತ್ಯ ಸಹಕಾರ ನೀಡಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಿದ್ಧವಿದೆ ಎಂದು ಐಎಂಎ ಕರ್ನಾಟಕ ಶಾಖೆಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಿರುಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರು ತಿಳಿಸಿದರು.

ಶ್ರೀಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹುಲಿಕುಂಟೆ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ತೊಗಲುಗೊಂಬೆ ಕಲೆಯು ಗ್ರಾಮೀಣ ಜೀವನಶೈಲಿ, ಸಂಸ್ಕೃತಿ ಮತ್ತು ಪೌರಾಣಿಕ ಕಥೆಗಳನ್ನೊಳಗೊಂಡ ವಿಶಿಷ್ಟ ನಾಟಕೀಯ ಪ್ರದರ್ಶನವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆಧುನಿಕ ಮನರಂಜನಾ ಮಾಧ್ಯಮಗಳ ಪ್ರಭಾವದಿಂದ ಈ ಕಲೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇದರಿಂದ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ. ತೊಗಲುಗೊಂಬೆ ಕಲೆಯನ್ನು ಉಳಿಸಲು ಸರ್ಕಾರ ಮತ್ತು ಸಂಘಟನೆಗಳು ವಿಶೇಷ ಯೋಜನೆಗಳನ್ನು ರೂಪಿಸಬೇಕು. ಭಾರತೀಯ ವೈದ್ಯಕೀಯ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮೂಲಕ ತೊಗಲುಗೊಂಬೆ ಕಲಾ ಪ್ರದರ್ಶನಕ್ಕೆ ಬೇಕಾದ ಪೂರಕ ಸಹಕಾರ ನೀಡಲಾಗುವುದು ಎಂದರು.

ಭಾಷಾ ಬಾಂಧವ್ಯ ಬಲಪಡಿಸಿದ ತೊಗಲುಗೊಂಬೆಗಳು

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಂಡೂರು ವಿರಕ್ತಮಠದ ಶ್ರೀ ಪ್ರಭುಸ್ವಾಮೀಜಿ, ಕನ್ನಡ ಹಾಗೂ ತೆಲುಗು ಭಾಷಾ ಬಾಂಧವ್ಯ ಬೆಳೆಸುವಲ್ಲಿ ತೊಗಲುಗೊಂಬೆ ಕಲಾ ಪ್ರಕಾರ ಬಹುದೊಡ್ಡ ಕೆಲಸ ಮಾಡಿದೆ. ಭಾಷೆಗಳ ನಡುವೆ ಬಾಂಧವ್ಯವನ್ನು ಬಲಪಡಿಸಲು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಜನತೆಗೆ ಪರಿಚಯಿಸುವ ಉದ್ದೇಶದಿಂದ ತೊಗಲುಗೊಂಬೆ ಕಲಾವಿದರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಶ್ರೀಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದವರು ರಾಜ್ಯಮಟ್ಟದ ಪ್ರಶಸ್ತಿ ನೀಡುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ನಾಡಿನ ವಿವಿಧ ಜಿಲ್ಲೆಗಳ ಸಾಧಕರನ್ನು ಗುರುತಿಸಿ 27 ಜನರಿಗೆ ಪ್ರಶಸ್ತಿ ನೀಡುವುದು ಸಣ್ಣ ಕೆಲಸವಲ್ಲ. ಸರ್ಕಾರ ಮಾಡುವ ಜವಾಬ್ದಾರಿಯುತ ಕಾರ್ಯವನ್ನು ಕಲಾ ತಂಡದ ಮುಖ್ಯಸ್ಥ ಹೊನ್ನೂರುಸ್ವಾಮಿ ಮಾಡಿರುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಶ್ರೀಪ್ರಭುಸ್ವಾಮೀಜಿಗಳು ಸ್ಮರಿಸಿದರು.

ಕಲಾವಿದರ ಸಮಸ್ಯೆ-ಸಂಕಟಗಳು

ಪ್ರಾಸ್ತಾವಿಕ ಮಾತನಾಡಿದ ಶ್ರೀಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ. ಹೊನ್ನೂರುಸ್ವಾಮಿ, ಶಾಲೆಗಳಿಗೆ ತೆರಳಿ ಮಕ್ಕಳಿಂದ ಐದತ್ತು ರೂಪಾಯಿಗಳನ್ನು ಪಡೆದು ಪ್ರದರ್ಶನ ನೀಡುವ ಸ್ಥಿತಿಗೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಇಡೀ ಬದುಕನ್ನು ಕಲಾ ಪ್ರಕಾರದ ಬೆಳವಣಿಗೆಗೆ ಮೀಸಲಿಟ್ಟಿದ್ದೇವೆ. ಆದರೆ, ಒಮ್ಮೊಮ್ಮೆ ನಿತ್ಯ ಬದುಕಿನ ಪ್ರಶ್ನೆ ಬಂದಾಗ ಬಹಳ ಬೇಸರವಾಗುತ್ತದೆ. ಇಂತಹ ಸಂಕಷ್ಟಗಳ ನಡುವೆ ಕೆಲವರು ಕಲಾವಿದರಿಗೆ ಪ್ರೋತ್ಸಾಹಿಸಲು ಮುಂದೆ ಬಂದಾಗ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತಷ್ಟೂ ಹುರುಪು ಮೂಡುತ್ತದೆ ಎಂದು ಹೇಳಿದರು.

ಜೆ.ಟಿ. ಫೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಮಾತನಾಡಿದರು. ಮೇಧಾ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ರಾಮ್ ಕಿರಣ್, ಜಾನಪದ ಕಲಾವಿದ ದೊಡ್ಡಬಸಪ್ಪ ಯಾಟಿ ಶ್ರೀಧರಗಡ್ಡೆ, ಎರ್ರಿಸ್ವಾಮಿ ತೊಗಲುಗೊಂಬೆ ಕಲಾ ಮೇಳದ ಅಧ್ಯಕ್ಷ ವೈ. ಪ್ರಭು ಹಾಗೂ ರಾಘವ ರೆಡ್ಡಿ ಕೊರ್ಲಗುಂದಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜ್ಯದ ವಿವಿಧ ಜಿಲ್ಲೆಗಳ 27 ಜನ ಸಾಧಕರನ್ನು ಗೌರವಿಸಲಾಯಿತು. ಮಲ್ಲಿಕಾರ್ಜುನ ತುರುನೂರು ಅವರಿಂದ ಸುಗಮ ಸಂಗೀತ, ಎಸ್‌ಕೆಆರ್ ಜಿಲಾನಿ ಬಾಷಾ ತಂಡದಿಂದ ಸಮೂಹ ನೃತ್ಯ ಹಾಗೂ ಮಲ್ಲಿಕಾರ್ಜುನಸ್ವಾಮಿ ಮತ್ತು ತಂಡದಿಂದ ಶ್ರೀರೇಣುಕಾ ಯಲ್ಲಮ್ಮ ಮಹಾತ್ಮೆ ಬಯಲಾಟ ಪ್ರದರ್ಶನ ಜರುಗಿತು. ಬಸವರಾಜ ಅಮಾತಿ ಹಾಗೂ ವಿಷ್ಣು ಹಡಪದ ಕಾರ್ಯಕ್ರಮ ನಿರ್ವಹಿಸಿದರು.