ಯಲಬುರ್ಗಾ: ಪ್ರತಿಯೊಬ್ಬ ವಿದ್ಯಾರ್ಥಿಗಳು ಆರ್ಥಿಕ ಮತ್ತು ವ್ಯವಹಾರ ತೆರಿಗೆ ಕಾಯಿದೆ ಬಗ್ಗೆ ತಿಳಿಯುವುದು ಅವಶ್ಯ ಎಂದು ಕೊಪ್ಪಳ ವಿವಿ ಉಪಕುಲಪತಿ ಡಾ. ಎಸ್.ವಿ. ಡಾಣಿ ಹೇಳಿದರು.
ಪಟ್ಟಣದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಜಿಎಸ್‌ಟಿ ೨.೦ ಮತ್ತು ಆದಾಯ ಆದಾಯ ತೆರಿಗೆ ಕಾಯಿದೆ-೨೦೨೫ರ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಾಯಿದೆ ಕುರಿತು ಸಮಗ್ರ ಜ್ಞಾನ ಹೊಂದಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಆರ್ಥಿಕ, ಕಾನೂನು ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತೆರಿಗೆ ನೀತಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ತೆರಿಗೆ ವ್ಯವಸ್ಥೆಯ ಮೂಲಭೂತ ಅಂಶ ತಿಳಿದಿರಬೇಕು ಎಂದು ಹೇಳಿದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಾಯಿದೆಗಳ ಜ್ಞಾನವು ಭವಿಷ್ಯದ ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಸಹಕಾರಿಯಾಗಲಿದೆ. ಬ್ಯಾಂಕಿಂಗ್, ಲೆಕ್ಕಪತ್ರ, ಆಡಿಟ್, ಹಣಕಾಸು ನಿರ್ವಹಣೆ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತೆರಿಗೆ ಜ್ಞಾನ ಅತ್ಯಂತ ಮುಖ್ಯವಾಗಿದೆ ಎಂದರು.ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಪಾಂಡುರಂಗ ವಿ., ಡಾ. ಹೊಸಮನಿ ಮಂಜುನಾಥ, ಜಿಎಸ್.ಟಿ ೨.೦ ವ್ಯವಸ್ಥೆಯ ಹೊಸ ನಿಯಮ, ಆದಾಯ ತೆರಿಗೆ ಕಾಯಿದೆ-2025ರ ಪ್ರಮುಖ ಅಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ವಿವರವಾದ ಉಪನ್ಯಾಸ ನೀಡಿದರು.
ತೆರಿಗೆ ವ್ಯವಸ್ಥೆಯ ಅರಿವು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳಲ್ಲಿಯೂ ಸಹಕಾರಿಯಾಗಲಿದೆ ಎಂದು ಸಂಪನ್ಮೂಲ ವ್ಯಕ್ತಿಗಳು ಹೇಳಿದರು.
ಈ ಸಂದರ್ಭ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಎಚ್. ರಾಮದುರ್ಗಾ, ಪ್ರತಿಭಾ ಹಿರೇಮಠ, ಅಲ್ತಾಪ್ ಹುಸೇನ್, ಪಡಿಯಪ್ಪ, ರವಿ ಚಳ್ಳಾರಿ, ಉಮೇಶ, ಶೃತಿ, ಕಾವ್ಯ, ಕರಿಷ್ಮಾ, ಪಮೀದಾ, ರಾಜ್ಯಶಾಸ್ತ್ರ ವಿಭಾಗದ ದೇವಪ್ಪ ಬಂಡ್ಲೇರ, ವಿದ್ಯಾರ್ಥಿ ಭೀಮಪ್ಪ ರ್ಯಾವಣಕಿ ಸೇರಿದಂತೆ ಇತರರು ಇದ್ದರು.