ಸಾರಾಂಶ
ಹಾನಗಲ್ಲ: ಮೌಲ್ಯವರ್ಧಿತ ಜೀವನ ವಿಕಾಸಕ್ಕೆ ಮಹತ್ವಾಕಾಂಕ್ಷಿ ಚಿಂತನೆಗಳನ್ನು ಒಳಗೊಂಡ ವಚನಗಳು ಸಾರ್ವಕಾಲಿಕ ಸತ್ಯಗಳಾಗಿದ್ದು, ಮನೆ ಮನಸ್ಸುಗಳು ವಚನ ಸಾಹಿತ್ಯದ ಸತ್ವ ಅರಿಯುವ ಅಗತ್ಯವಿದೆ ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ ತಿಳಿಸಿದರು.ಸೋಮವಾರ ಹಾನಗಲ್ಲಿನ ನ್ಯೂ ಕಾಂಪೋಜಿಟ್ ಪದವಿ ಪೂರ್ವ ಕಾಲೇಜಿನಲ್ಲಿ ವೈಚಾರಿಕ ಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಅಂಗವಾಗಿ ವಚನ ಸಾಹಿತ್ಯ ಮೌಲಿಕ ಬದುಕು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಪರಿವರ್ತನೆಯ ಕಾಲದಲ್ಲಿರುವ ಈ ಜಗತ್ತಿಗೆ ವಚನ ಸಾಹಿತ್ಯ ಸರಳ ಜೀವನ ವಿಧಾನವನ್ನು ನೀಡುವ ಶ್ರೇಷ್ಠ ಚಿಂತನೆ ಹೊಂದಿದೆ. ೧೨ನೇ ಶತಮಾನದ ಶರಣರು ತಾರ್ಕಿಕ, ಸೈದ್ಧಾಂತಿಕ, ವೈಚಾರಿಕ ಸಂಗತಿಗಳನ್ನು ಸರಳವಾಗಿ ತಿಳಿಸಿಕೊಟ್ಟಿದ್ದಾರೆ. ವಚನ ಚಳುವಳಿ ಅಂದಿನ ಸಾಮಾಜಿಕ ಏರು ಪೇರುಗಳನ್ನು ಸರಿಪಡಿಸಿ ಸಾಮಾಜಿಕ ನ್ಯಾಯಕ್ಕೆ ನೀಡಿದ ಸತ್ಯ ಸಂದೇಶಗಳು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ರವಿ ಜಡೆಗೊಂಡರ, ನಮ್ಮ ಸಾಮರ್ಥ್ಯ ಕ್ರಿಯಾಶೀಲತೆ ಹಾಗೂ ಸಾತ್ವಿಕ ಜೀವನ ವಿಧಾನಗಳು ನಮಗೆ ಗೌರವ ತಂದು ಕೊಡುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕೆ ಪೈಪೋಟಿ ಇದೆ. ಶರಣರ ಕಾಯಕ ಧರ್ಮ ಈಗ ಇನ್ನಷ್ಟು ಮಹತ್ವ ಪಡೆದಿದೆ. ಪರೋಪಕಾರದಲ್ಲಿ ತೃಪ್ತಿ ಕಂಡ ಶರಣರು ಸಮಾಜದ ಪ್ರತಿಯೊಬ್ಬರು ಸಮಾನ ಗೌರವ ಪಡೆದು ಬದುಕುವ ದಾರಿ ತೋರಿದರು. ವಚನಗಳ ಆಂತರ್ಯವನ್ನು ಅರಿತು ನಡೆದರೆ ಬಾಳು ಹಸನಾಗಬಲ್ಲದು ಎಂದರು.ಶ್ವೇತಾ ಗಡಿಯಣ್ಣನವರ, ಸೌಜನ್ಯ ಯಳವಟ್ಟಿ, ಸಿತಾರಾ ಪಾಟೀಲ ಅವರು ಶರಣ ಹಡಪದ ಅಪ್ಪಣ್ಣ ಹಾಗೂ ವಚನಗಳಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿ, ಶರಣ ಹಡಪದ ಅಪ್ಪಣ್ಣ ಬಸವಣ್ಣನವರ ಆಪ್ತರಾಗಿ, ಅನುಭವ ಮಂಟಪದ ಕಾರ್ಯದರ್ಶಿಯಾಗಿ ಸ್ಮರಣೀಯ ಕಾರ್ಯ ಮಾಡಿದವರು. ವಚನ ಚಳುವಳಿ ಅಜ್ಞಾನ ಅಸಮಾನತೆ ಮೂಢನಂಬಿಕೆ ತ್ಯೆಜಿಸಿ ಸಮಾನತೆಯ ಶ್ರೇಷ್ಠ ಬದುಕಿನ ಸತ್ಯವನ್ನು ಸಾದರಪಡಿಸಿದೆ. ಬಸವ ಯುಗ ಸಾಹಿತ್ಯದ ಇತಿಹಾಸದಲ್ಲಿ ಅಚ್ಚಳಿಯದ ಪ್ರಕಾರ. ಜನಭಾಷೆಯನ್ನು ಬಳಸಿ ಬದುಕನ್ನು ಅರಳಿಸುವ ಸಾಹಿತ್ಯ ನೀಡಿರುವುದು ಇಲ್ಲಿನ ವಿಶೇಷ ಎಂದರು.ಉಪನ್ಯಾಸಕರಾದ ಎಫ್.ಸಿ.ಕಾಳಿ, ಕೇಶವ ಶೇಷಗಿರಿ, ಆಂಜನೇಯ ಹಳ್ಳಳ್ಳಿ, ಅಕ್ಷತಾ ಕೂಡಲಮಠ, ಲಿಂಗರಾಜ ಗುಂಡೇಗೌಳಿ, ಪ್ರದೀಪ ಕಾಟೇಕರ ಅತಿಥಿಗಳಾಗಿದ್ದರು. ಪಾರ್ವತಿ ಕೊಪ್ಪದ, ವೇದಾ ಕೊಪ್ಪದ, ಸಂಧ್ಯಾ ಯಾದವ ವಚನಗಳನ್ನು ಹಾಡಿದರು. ಪುಷ್ಪಾ ಹಿರೇಮಠ ಸ್ವಾಗತಿಸಿದರು. ನೇತ್ರಾವತಿ ಹೊಸಮನಿ ನಿರೂಪಿಸಿದರು. ಭಾರ್ಗವಿ ಬಾಗೇವಾಡಿ ವಂದಿಸಿದರು.