ಪರಿಸರ ಸಮತೋಲನ ಕಾಪಾಡುವುದು ಅಗತ್ಯ

| Published : Oct 31 2024, 02:01 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ಆರೂಡಿ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿದ್ದು, ವೈವಿಧ್ಯತೆಯ ಕಾಡು ಬೀಜಗಳ ನೇರ ಬಿತ್ತನೆ ಕಾರ್ಯಕ್ರಮವನ್ನು ಯುವ ಸಂಚಲನ, ವಲಯ ಅರಣ್ಯ ಇಲಾಖೆ ಹಾಗೂ ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ದೊಡ್ಡಬಳ್ಳಾಪುರ: ತಾಲೂಕಿನ ಆರೂಡಿ ಅರಣ್ಯ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಿದ್ದು, ವೈವಿಧ್ಯತೆಯ ಕಾಡು ಬೀಜಗಳ ನೇರ ಬಿತ್ತನೆ ಕಾರ್ಯಕ್ರಮವನ್ನು ಯುವ ಸಂಚಲನ, ವಲಯ ಅರಣ್ಯ ಇಲಾಖೆ ಹಾಗೂ ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂದು ಎಲ್ಲಾ ಜನರು ಅರಿತುಕೊಂಡರೆ ಪರಿಸರದ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ. ಅದರಲ್ಲೂ ಇಂದಿನ ಯುವಜನತೆಗೆ ಪರಿಸರದ ಕುರಿತು ಅರಿವು ಮೂಡಿಸುವುದು ಬಹುಮುಖ್ಯ ಕೆಲಸ ಹಾಗೂ ಇಂತಹ ಪರಿಸರದ ಕಾರ್ಯಗಳು ಯಶಸ್ವಿಯಾಗಬೇಕಾದರೆ ಯುವ ಸಂಚಲನ ದಂತಹ ಕೊಂಡಿಗಳು ಅರಣ್ಯ ಇಲಾಖೆಗೆ ಬಹುಮುಖ್ಯವಾಗಿ ಬೇಕಾಗುತ್ತದೆ ಎಂದುತಿಳಿಸಿದರು.

ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮೂರ್ತಿ ಮಾತನಾಡಿ, ಆರೂಢಿ ಅರಣ್ಯ ಪ್ರದೇಶದ ವ್ಯಾಪ್ತಿಯ 25 ಹೆಕ್ಟೇರ್ ಪ್ರದೇಶದಲ್ಲಿ 15ಕ್ಕೂ ಹೆಚ್ಚು ವಿವಿಧ ಜಾತಿಯ (ಅಂಕೋಲೆ, ತಪ್ಸಿ, ಹಿಪ್ಪೆ, ಮಡ್ಡಿಮರ, ಸೀತಾಪಲ, ತಾರೆ, ಕಿರು ಬಿದಿರು, ಕಕ್ಕೆ, ಬಿಕ್ಕೆ, ಬಿಲ್ವರ, ಬೂರಗ, ಗೋಣಿ, ಬಸರೆ, ಅಮಟೆ, ಬಿಳಿದಾಳೆ) ಬೀಜಗಳನ್ನು ನೇರ ಬಿತ್ತನೆ ಮಾಡಲಾಯಿತು. ಪರಿಸರಕ್ಕೆ ನಮ್ಮಿಂದಾಗುವ ಮಟ್ಟಿಗೆ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶ,ಈ ಕಾರ್ಯವನ್ನು ಇಂದಿಗೆ ಮಾತ್ರ ಸೀಮಿತಗೊಳಿಸದೆ ನಮ್ಮ ನಮ್ಮ ವ್ಯಾಪ್ತಿಯಲ್ಲಿ ನಮಗಾಗುವ ಮಟ್ಟಿಗೆ ಪರಿಸರದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಬಹು ಮುಖ್ಯ ಎಂದು ಯುವ ಜನರಿಗೆ ತಿಳಿಸಿದರು. ಇದಕ್ಕೂ ಮುಂಚೆ ಬಿತ್ತಿದ ಅದೆಷ್ಟೋ ಅರಣ್ಯವೂ ಸಮೃದ್ಧಿಯಾಗಿ ಬೆಳೆದಿದ್ದು ಅದರ ಉಳಿಸುವಿಕೆಯಲ್ಲಿ ಅರಣ್ಯ ಇಲಾಖೆಯ ಪಾತ್ರ ಬಹುಮುಖ್ಯ ಎಂದು ತಿಳಿಸಿದರು. ಸೇಂಟ್ ಕ್ಲಾರೆಟ್ ಕಾಲೇಜಿನ ಉಪನ್ಯಾಸಕ ವಿನೀತ್ ಹಾಗೂ ಕಾಲೇಜಿನ ವಿವಿಧ ವಿಭಾಗದ 50ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯುವ ಸಂಚಲನ ತಂಡದ ಸದಸ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.