ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬರ್ಹಿದೆಸೆ ಮುಕ್ತ ಸ್ಥಿರತೆ ಕಾಯ್ದುಕೊಳ್ಳವುದು ಅಗತ್ಯವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಉತ್ತಮ ಅನುಷ್ಠಾನಕ್ಕಾಗಿ ವಾಶ್ ಕಾರ್ಯಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಗ್ರಾಮೀಣ ಜನರಲ್ಲಿ ಆರೋಗ್ಯಕರ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸಬೇಕಾಗಿದೆ ಎಂದು ಹೇಳಿದರು.
ಜಲಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಅನುಷ್ಠಾನದ ಮೂಲ ಉದ್ದೇಶ ಶುದ್ಧ ಕುಡಿಯುವ ನೀರು, ನೀರಿನ ಸಂರಕ್ಷಣೆ, ಪ್ರತಿಯೊಂದು ಗ್ರಾಮಗಳಲ್ಲಿ ಬಯಲು ಬರ್ಹಿದೆಸೆ ಮುಕ್ತ ಸ್ಥಿರತೆ ಕಾಯ್ದುಕೊಳ್ಳವುದು ಆಗಿದೆ. ಈ ನಿಟ್ಟಿನಲ್ಲಿ ನೂತನ ತಾಂತ್ರಿಕ ಕೌಶಲ್ಯಗಳನ್ನು ಉಪಯೋಗಿಸಿಕೊಂಡು ಐಇಸಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಗ್ರಾಮೀಣ ಸಮುದಾಯದಲ್ಲಿ ವ್ಯಾಪಕವಾದ ಅರಿವು ಮೂಡಿಸಬೇಕಾಗಿದೆ ಎಂದರು.ಪ್ರತಿ ಮನೆ ಮನೆಗೂ ನಲ್ಲಿ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆಯಲ್ಲೂ ಓವರ್ ಹೆಡ್ ಟ್ಯಾಂಕ್‍ಗಳ ನಿರ್ಮಾಣ ಸೇರಿದಂತೆ ಜಲಜೀವನ್ ಮಿಷಯ್ ವತಿಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.
ಜಲಜೀವನ್ ಮಿಷನ್ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಗ್ರಾಪಂ ಗಳಿಗೆ ಹಸ್ತಾಂತರಿಸಬೇಕು. ಹಸ್ತಾಂತರದ ನಂತರ ನಿರ್ವಹಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು, ಅನುಮಾನಗಳು ಇದ್ದು ತರಬೇತಿ ನಂತರದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2012ರಿಂದಲೂ ವೈಯಕ್ತಿಕ ಹಾಗೂ ಸಮುದಾಯ ಶೌಚಾಯಗಳನ್ನು ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಘನತ್ಯಾಜ್ಯ, ಬೂದು ನೀರು ಹಾಗೂ ಹೊಸದಾಗಿ ಮಲತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಕುಡಿಯುವ ನೀರು ಸರಬರಾಜು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ರಚನೆ ಮಾಡಿ ಕಾರ್ಯಾಚರಣೆ ಜವಾಬ್ದಾರಿ ವಹಿಸಲಾಗಿದೆ. ನೈರ್ಮಲ್ಯ ಸುಸ್ಥಿರತೆ ಮತ್ತು ವಾಶ್ ಚಟುವಟಿಕೆಗಳ ಕುರಿತು ತಾಪಂ ಇಒಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರು, ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಹಾಗೂ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಪಿಡಿಒಗಳು ಕ್ಷೇತ್ರಮಟ್ಟದ ಸಿಬ್ಬಂದಿಗಳ ಸಾಮರ್ಥ್ಯ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.
ತಾಲೂಕು ಪಂಚಾಯಿತಿ ವೈ.ರವಿಕುಮಾರ್ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ನೀರು ಮತ್ತು ನೈರ್ಮಲ್ಯ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ರಾಜ್ಯ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ.ರೆಬೆಲ್ಲೋ, ಜಲಜೀವನ್ ಮಿಷನ್ ಯೋಜನೆ ಯಶಸ್ವಿ ಅನುಷ್ಠಾನ ಮತ್ತು ಸುಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಾಚಾರಣೆ ಕುರಿತು ಮಾಹಿತಿ ನೀಡಿದರು. ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ರಚನೆ ಮತ್ತು ಕಾರ್ಯಾಚರಣೆ ಜವಾಬ್ದಾರಿಗಳು ಹಾಗೂ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆಕಡೆ ಗಮನ ಹರಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ನೀರು ಮತ್ತು ನೈರ್ಮಲ್ಯ ಸಂಬಂಧಿಸಿದ ಪರಿಕರಗಳ ವಿತರಿಸಲಾಯಿತು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಮೂರ್ತಿ, ಹಿರಿಯೂರು ಸಹಾಯಕ ಕಾರ್ಯಪಾಲಕ ಅಭಿಯಂತರ ಹಸ್ಸೆನ್ ಭಾಷಾ, ಜಿಲ್ಲಾ ವಾಶ್ ಐಇಸಿ ಸಮಾಲೋಚಕ ನಾಗರಾಜ್, ಜೆಜೆಎಂ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ಎಸ್.ನಾಡರ್, ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಸಮಾಲೋಚಕ ಕಿರಣ್ ಪಾಟೀಲ್, ಚಂದ್ರಕಾಂತ್, ಯಲ್ಲಪ್ಪ, ಗೀತಾಲಕ್ಷ್ಮಿ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಎಚ್‍ಆರ್‌ಡಿ ವಿನಯ್ ಕುಮಾರ್, ಎಸ್‍ಎಲ್‍ಡಬ್ಲ್ಯೂಎಂ ಸಮಾಲೋಚಕಿ ಪ್ರಿಮಿಳಾ, ಸೇರಿದಂತೆ ಮತ್ತಿತರರು ಇದ್ದರು.