ಮಹಾವೀರರ ತತ್ವಗಳ ಪಾಲನೆ ಅಗತ್ಯ: ರಾಜೇಶ್

| Published : Apr 22 2024, 02:02 AM IST

ಸಾರಾಂಶ

ಮಹಾವೀರರು ಭೋಧಿಸಿದ ಸತ್ಯ, ಅಹಿಂಸಾ ಮಾರ್ಗಗಳನ್ನು ಎಲ್ಲರೂ ಅನುಸರಿಸಬೇಕಾಗಿದೆ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.

ಹಿರಿಯೂರು: ಮಹಾವೀರರು ಭೋಧಿಸಿದ ಸತ್ಯ, ಅಹಿಂಸಾ ಮಾರ್ಗಗಳನ್ನು ಎಲ್ಲರೂ ಅನುಸರಿಸಬೇಕಾಗಿದೆ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಚರಿಸಿದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಅಹಿಂಸಾ ಮಾರ್ಗದಲ್ಲಿ ನಡೆದರೆ ಮಾತ್ರ ಜೀವನ ಸಾರ್ಥಕವಾಗುವುದು. ನಮ್ಮ ನಮ್ಮ ಪ್ರಯತ್ನಗಳು ಮತ್ತು ಕಾಯಕಗಳಲ್ಲೇ ಭಗವಂತನನ್ನು ಕಾಣಬಹುದು ಎಂಬ ಅವರ ಸಂದೇಶವನ್ನು ಎಲ್ಲರೂ ಪಾಲಿಸಬೇಕಾಗಿದೆ. ಅವರು ಅಹಿಂಸೆ, ಸತ್ಯ, ಬ್ರಹ್ಮಚರ್ಯ, ಕಳ್ಳತನ ಮಾಡದೇ ಇರುವುದು, ಅಪರಿಗ್ರಹ ಎಂಬ ಐದು ತತ್ವಗಳನ್ನು ಪ್ರತಿಪಾದಿಸಿದ್ದರು ಎಂದರು. ಮುಖಂಡ ಪ್ರಕಾಶ್ ಜೈನ್ ಮಾತನಾಡಿ, ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ರಾಜ ಮನೆತನದ ಸುಖ ಭೋಗಗಳನ್ನು ತ್ಯಜಿಸಿ 12 ವರ್ಷಗಳ ಕಾಲ ತಪಸ್ಸು ಮಾಡಿ ಕೈವಲ್ಯ ಜ್ಞಾನ ಪಡೆದರು. ಅವರ ತತ್ವ, ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಶಿರಸ್ತೇದಾರ್ ಕೆಬಿ ತಿಪ್ಪೇಸ್ವಾಮಿ, ಸಮುದಾಯದ ಮುಖಂಡರಾದ ಬಾಬುಲಾಲ್ ಜೈನ್, ಅಂಬುಜಾ, ಶಶಿಧರ್, ಹನುಮಂತರಾಯ, ಶ್ರೀನಿವಾಸ ರೆಡ್ಡಿ, ಮೇಘ, ಸೀಮಾ, ಮಧುಮತಿ ಮುಂತಾದವರು ಹಾಜರಿದ್ದರು.