ಹಿರೇಕೆರೂರು: ಗ್ರಾಮೀಣ ಭಾಗದಲ್ಲಿ ವಿಶೇಷ ಸಂದರ್ಭಗಳಲ್ಲಿ ನಾಟಕಗಳು ಪ್ರದರ್ಶನ ಏರ್ಪಡಿಸುವ ಮೂಲಕ ರಂಗ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ತಾಲೂಕಿನ ನೂಲಗೇರಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಮಾತಂಗೇಶ್ವರಿ ನವರ ತರುಣ ನಾಟ್ಯ ಸಂಘದ ಕಲಾವಿದರಿಂದ ಅಭಿನಯಿಸಲ್ಪಟ್ಟ ಅನ್ನ ಕೊಟ್ಟ ರೈತನಿಗೆ ಸಾವು ಕೊಟ್ಟ ಸಾಹುಕಾರ ಎಂಬ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಜಾತ್ರೆ, ರಥೋತ್ಸವ, ಹಬ್ಬ, ಹರಿದಿನಗಳು ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಣ್ಣಾಟ, ಬಯಲಾಟ, ನಾಟಕಗಳು ಪ್ರದರ್ಶನ ಏರ್ಪಡಿಸುವ ಮೂಲಕ ರಂಗ ಭೂಮಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಲಾಗುತ್ತಿದೆ. ನಾಟಕಗಳು ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ, ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುವ ಮತ್ತು ಬದಲಾವಣೆಯನ್ನು ತರುವ ಮಹಾನ್ ಸಾಧನಗಳಾಗಿವೆ ಎಂದರು.ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಶ್ರೇಷ್ಠವಾಗಿವೆ. ಭಾರತಕ್ಕೆ ಅವರು ಅಪಾರವಾದ ಕೊಡುಗೆ ನೀಡಿದ್ದಾರೆ ಹಾಗೂ ಎಲ್ಲ ಕ್ಷೇತ್ರಗಳಿಗೂ ಸಂವಿಧಾನದ ಮೂಲಕ ಅನುಕೂಲ ಕಲ್ಪಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಆದರ್ಶಗಳನ್ನು ಪಾಲನೆ ಮಾಡಿ ಅವರು ಕನಸುಗಳನ್ನು ಸಾಕಾರಗೊಳಿಸಬೇಕು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನದಂದು ನಾಟಕ ಅಭಿನಯ ಮಾಡುತ್ತಿದ್ದು, ನಾಟಕದ ಸಾರ ಅರಿತು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಈರನಗೌಡ ದಳವಾಯಿ, ಸಿದ್ಧಲಿಂಗಯ್ಯ ಹಿರೇಮಠ, ರುದ್ರಮುನಿ ಹುಲ್ಮನಿ, ದುರಗೇಶ ತಿರಕಪ್ಪನವರ, ಗಂಗಾಧರ ಬೋಗೇರ, ಗಣೇಶ ತಾವರಗಿ, ಉಮಾ ಚಕ್ರಸಾಲಿ, ಮನೋಹರ ಕಮ್ಮಾರ, ವಸಂತಪ್ಪ ಹುಲಮನಿ, ರಾಜಪ್ಪ ಬಂಗೇರ, ಮರಿಯಪ್ಪ ದೊಡ್ಮನಿ, ರಾಮಪ್ಪ ನಡುಗೇರಿ, ನಾಗಪ್ಪ ನಿಂಗವ್ವನವರ, ಸುಭಾಸ್ ಹೆಡಿಯಾಲ, ವಿ.ಎಚ್. ಕೋರಿ, ವೀರಭದ್ರಯ್ಯ ಕುಂಚೂರಮಠ, ಗಣೇಶ ಕೋರಿ, ಬಸವರಾಜ ಚಲವಾದಿ ಶಿವನಾಗಪ್ಪ ಕೋರಿ, ಉಜ್ಜಪ್ಪ ಚಿಕ್ಕೇರಿ ಬಸವರಾಜಯ್ಯ ಹಲಗೇರಿಮಠ ಸೇರಿ ನಾಟ್ಯ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.