ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ, ಐ.ಆರ್.ಐ.ಡಿ.ಎಸ್ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ‘ವಿಶ್ವ ಪರಿಸರ ದಿನಾಚರಣೆ’ಯನ್ನು ಆಯೋಜಿಸಿಲಾಗಿತ್ತು.
ಕೇಂದ್ರದ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜಿ.ಕೆ.ನಿಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯ ಮಹತ್ವವನ್ನು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ಈ ದಿನವನ್ನು ಆಚರಿಸಲು ಕರೆ ನೀಡಿದೆ ಎಂದರು.2026 ನೇ ಸಾಲಿನ ಧ್ಯೇಯ ವಾಕ್ಯವಾದ –‘ಹವಾಮಾನ ಕ್ರಮ ಮತ್ತು ನಮ್ಮ ಭವಿಷ್ಯಕ್ಕಾಗಿ - ಪ್ರಕೃತಿಯಿಂದ ಪ್ರೇರಣೆ’ಯ ಬಗ್ಗೆ ವಿವರಿಸಿ, ಹವಾಮಾನ ಬದಲಾವಣೆಯನ್ನು ತಡೆಯಲು ತಕ್ಷಣದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಂದು ನಮ್ಮ ಭೂಮಿ ಅನೇಕ ಪರಿಸರ ಸವಾಲುಗಳನ್ನು ಎದುರಿಸುತ್ತಿದೆ. ಅರಣ್ಯನಾಶ, ವಾಯು ಮಾಲಿನ್ಯ, ಜಲ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯ, ಜೀವ ವೈವಿದ್ಯದ ಕುಸಿತ ಮತ್ತು ಜಾಗತಿಕ ತಾಪಮಾನ ಏರಿಕೆ ಇವುಗಳು ಮಾನವ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಮರಗಳನ್ನು ಬೆಳೆಸಬೇಕು. ನೀರನ್ನು ಮಿತವಾಗಿ ಬಳಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಬೇಕು ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಲು ಉತ್ತೇಜಿಸಬೇಕೆಂದು ತಿಳಿಸಿದರು.
ಕೇಂದ್ರದ ಮುಖ್ಯಸ್ಥ ಡಾ. ಬಿ.ಜಿ. ಹನುಮಂತರಾಯ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಪ್ರಾಮುಖ್ಯತೆಯ ವಿವರಿಸುತ್ತಾ 1952 ರಲ್ಲಿ ಅರಣ್ಯ ನೀತಿಯ ಪ್ರಕಾರ ಪ್ರತಿ ದೇಶ ಆರೋಗ್ಯಕರವಾಗಿರಬೇಕೆಂದರೆ ಶೇ. 33 ರಷ್ಟು ಅರಣ್ಯ ಇರಬೇಕು, ಸ್ವಾತಂತ್ರ್ಯಾ ನಂತರ ಅಭಿವೃದ್ಧಿಯ ಹೆಸರಲ್ಲಿ ಅರಣ್ಯವನ್ನು ನಾಶ ಮಾಡುತ್ತಿದ್ದೇವೆ. ಇದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ, ಮಳೆಯ ಹಂಚಿಕೆ ಏರುಪೇರಾಗುತ್ತಿದೆ. ಪರಿಸರವನ್ನು ಸಮತೋಲನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಹೆಚ್ಚು ಮರಗಳನ್ನು ಬೆಳೆಸಬೇಕೆಂದು ತಿಳಿಸಿದರು.ಮೈತ್ರಿ ಸಂಸ್ಥೆಯ ಹರೀಶ್ ಬಾಬು ಮಾತನಾಡಿ, ರೈತರು ತಮ್ಮ ಜಮೀನುಗಳಲ್ಲಿ ಮಾತ್ರವಲ್ಲದೆ, ಸರ್ಕಾರಿ ಜಮೀನು, ಅರಣ್ಯ ಪ್ರದೇಶಗಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಸಂರಕ್ಷಿಸಬೇಕು ಮತ್ತು ಅರಣ್ಯ ಬೆಳೆಸಲು ದಶಕಗಳ ಕಾಲ ಬೇಕೆಂದು ತಿಳಿಸಿದರು. ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಮಳೆ ನೀರು ಕೊಯ್ಲು ಮಾಡಿ ನೀರಿನ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಮಾಜಿ ಗ್ರಾಪಂ ಅಧ್ಯಕ್ಷ ನಾಗರಾಜ್, ದೊಡ್ಡಬಳ್ಳಾಪುರದ ಐ.ಆರ್.ಐ.ಡಿ.ಎಸ್, ಸಂಸ್ಥೆಯ ಯೋಜನಾ
ನಿರ್ದೇಶಕ ಮಂಜುನಾಥ್ ಪಾಟೀಲ್, ಮಣ್ಣು ಸರ್ವೇಕ್ಷಣ ಮತ್ತು ಭೂ ನಿಯೋಜನ ಸಂಸ್ಥೆ, ಬೆಂಗಳೂರಿನ ಹಿರಿಯ ವಿಜ್ಞಾನಿ ಡಾ. ಸುನಿಲ್ ಪಿ. ಮಸ್ಕೆ,ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ. ಗೋಪಾಲ್, ಮತ್ತಿತರರು ಮಾತನಾಡಿದರು.
ಅತಿಥಿಗಳಿಂದ ಕೇಂದ್ರದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಭಾಗವಹಿಸಿದ್ದ ರೈತರೆಲ್ಲರಿಗೂ ಮಾವು, ನೇರಳೆ, ಕರಿಬೇವು ಮತ್ತು ಸೀಬೆ ಗಿಡಗಳನ್ನು ವಿತರಿಸಲಾಯಿತು.ಕೃಷಿ ಇಂಜಿನಿಯರ್ ವೆಂಕಟಾಚಲಪತಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಈಶ್ವರಪ್ಪ, ಡಾ. ಗೋಪಿಕಾ ಸಿ. ಮುತ್ತಗಿ, ಡಾ. ಬಾಲಾಜಿ ನಾಯ್ಕ್, ಡಾ. ಸುಪ್ರಿಯಾ ಮತ್ತಿತರರಿದ್ದರು.
ಫೋಟೋ-5ಕೆಡಿಬಿಪಿ7- ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಸರ ದಿನಾಚರಣೆ ನಡೆಯಿತು.