ಸಾರಾಂಶ
ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ.
ಹುಬ್ಬಳ್ಳಿ:
ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವ ಜತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ. ರವೀಂದ್ರ ಯಲಕಾನ ಹೇಳಿದರು.ಅವರು ಇಲ್ಲಿನ ಕೇಶ್ವಾಪುರ ಎಸ್‌ಬಿಐ ಹೈಯರ್ ಪ್ರೈಮರಿ ಶಾಲೆಯಲ್ಲಿ ಎಸ್‌ಡಿಎಂ ಗ್ರಾಮೀಣಾಭಿವೃದ್ಧಿ ಸಂಘದ ವತಿಯಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ. ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.ತಂಬಾಕು ಸೇವನೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಯಾವುದೇ ಸಭೆ, ಸಮಾರಂಭಗಳಲ್ಲಿ ಧೂಮಪಾನ, ಮ್ಯೂಸಿಕ್, ಸೌಂಡ್, ಡಾನ್ಸ್ ಇದನ್ನೆಲ್ಲ ಕಡಿಮೆ ಮಾಡಿ ಭಕ್ತಿಯಿಂದ ಭಜನೆ, ಪೂಜಾ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡಬೇಕು ಎಂದ ಅವರು, ಆರೋಗ್ಯ ಮತ್ತು ಆರೋಗ್ಯಕರ ಜೀವನ ಭವಿಷ್ಯದ ಪೀಳಿಗೆ ರಕ್ಷಿಸಲು ಈ ದಿನವನ್ನು ಮಹತ್ವದ ದಿನವನ್ನಾಗಿ ಆಚರಿಸಲು ಮಹತ್ವ ನೀಡಬೇಕು ಎಂದು ಹೇಳಿದರು.ಈ ವೇಳೆ ಶಾಲಾ ಪ್ರಾಂಶುಪಾಲರಾದ ಹಿರೇಮಠ, ರಾಜು ಬದ್ದಿ ಹಾಗೂ ಎಸ್‌ಡಿಎಂ ಕಾರ್ಯಾಗಾರದ ಪ್ರಮುಖರು ಇದ್ದರು.