ಸಾರಾಂಶ
ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಪದ್ಧತಿಯಿಂದ ಹೆಚ್ಚು ಪ್ರತಿಭಾವಂತರಾಗುತ್ತಿದ್ದಾರೆ. ನಮ್ಮ ಮಕ್ಕಳು ಅತಿ ಹೆಚ್ಚು ಅಂಕಗಳಿಸಬೇಕು ಎನ್ನುವ ಮನೋಭಾವ ಪಾಲಕರಲ್ಲಿ ಬೆಳೆಯುತ್ತಿರುವುದು ಆರೋಗ್ಯಕರ ಲಕ್ಷಣವಲ್ಲ
ಲಕ್ಷ್ಮೇಶ್ವರ: ಶಿಕ್ಷಕರು ಮಕ್ಕಳಲ್ಲಿ ಅಕ್ಷರದ ಜತೆಗೆ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ಪುರಸಭೆ ಸದಸ್ಯೆ ಜಯಕ್ಕ ಕಳ್ಳಿ ಹೇಳಿದರು.
ಶನಿವಾರ ಸಂಜೆ ಪಟ್ಟಣದ ಲಿಟಲ್ ಹಾರ್ಟ್ ಇಂಟರ್ ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಪದ್ಧತಿಯಿಂದ ಹೆಚ್ಚು ಪ್ರತಿಭಾವಂತರಾಗುತ್ತಿದ್ದಾರೆ. ನಮ್ಮ ಮಕ್ಕಳು ಅತಿ ಹೆಚ್ಚು ಅಂಕಗಳಿಸಬೇಕು ಎನ್ನುವ ಮನೋಭಾವ ಪಾಲಕರಲ್ಲಿ ಬೆಳೆಯುತ್ತಿರುವುದು ಆರೋಗ್ಯಕರ ಲಕ್ಷಣವಲ್ಲ. ಮಕ್ಕಳಲ್ಲಿ ಅಕ್ಷರದ ಜತೆಯಲ್ಲಿ ಮಾನವೀಯ ಮೌಲ್ಯ ಹಾಗೂ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಶಾಲೆಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಮುಖ್ಯೋಪಾಧ್ಯಾಯ ಗಂಗಾಧರ ಶಿರಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ನಾವು ತಪ್ಪದೆ ಮಾಡುತ್ತೇವೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಗಲಿರುಳು ಶ್ರಮಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸುತ್ತಿರುವ ಮಕ್ಕಳ ಪ್ರತಿಭೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.ಶಾಸಕ ಡಾ.ಚಂದ್ರು ಲಮಾಣಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು.
ಈ ವೇಳೆ ಸುಲೇಮಾನ್ ಕಣಿಕೆ,ಬಿಆರ್‌ಪಿ ಬಿ.ಎಂ.ಯರಗುಪ್ಪಿ, ಸಿಆರ್‌ಪಿ ಸತೀಶ್ ಬೊಮಲೆ, ಸಂಸ್ಥೆಯ ಅಧ್ಯಕ್ಷ ರಮೇಶ ಶಿರಹಟ್ಟಿ, ರಾಜಶೇಖರ ಶಿರಹಟ್ಟಿ, ಫಕ್ಕೀರೇಶ ಶಿರಹಟ್ಟಿ, ಮಲ್ಲೇಶಪ್ಪ ದಲಾಲ ಇದ್ದರು.ಶಿಕ್ಷಕಿ ಮೇರಿ ಆಂಟೋನಿ ಸ್ವಾಗತಿಸಿದರು. ಶಿಕ್ಷಕಿ ಹಡಗಲಿ ಹಾಗೂ ಕೊಡ್ಲಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ಮಕ್ಕಳ ಭಾರತ ನಾಟ್ಯ ಸೇರಿದಂತೆ ವಿವಿಧ ಬಗೆಯ ನೃತ್ಯ ರೂಪಕಗಳು ನೋಡುಗರಲ್ಲಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯ ವಿದ್ಯಾರ್ಥಿಗಳು ಮಾಡಿದ್ದು ಕಂಡು ಬಂದಿತು.