ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಾಧನೆಯನ್ನು ಪ್ರತಿಯೊಬ್ಬರು, ಪ್ರತಿನಿತ್ಯವೂ ಸ್ಮರಿಸುವುದು ಅವಶ್ಯಕವಾಗಿದೆ ಎಂದು ಎಂ.ಎಚ್.ಚನ್ನೇಗೌಡ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಅಪೂರ್ವಚಂದ್ರ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮದ್ದೂರು ಹಾಗೂ ಎಚ್.ಕೆ.ವೀರಣ್ಣಗೌಡ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜನ್ಮ ಜಯಂತಿಯಲ್ಲಿ ಮಾತನಾಡಿದರು.
ಮಂಡ್ಯ, ಮೈಸೂರು, ಬೆಂಗಳೂರು ಪ್ರಾಂತ್ಯದ ಜನ ಸುಭಿಕ್ಷತೆಯಿಂದ ಬದುಕಲು ನಾಲ್ವಡಿಯವರ ತಾಯಿ ಹಾಗೂ ಮಡದಿಯ ತ್ಯಾಗ ನಿಜಕ್ಕೂ ಪ್ರಶಂಷನೀಯವಾಗಿದೆ. ಆದರೆ, ಒಡೆಯರ್ ಅವರ ಸಾಧನೆ ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು ಎಂದರು.ಇಡೀ ಭಾರತದಲ್ಲಿ ಅಪ್ರತಿಮ ಸಾಧನೆ ಮಾಡಿ ಸಾಮಾನ್ಯ ಜನರು ನೆಮ್ಮದಿಯಿಂದ ಬದುಕಲು ದಾರಿದೀಪವಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಇಂದಿಗೂ ಸಹಾ ಭಾರತ ರತ್ನ ಪ್ರಶಸ್ತಿಯನ್ನು ನೀಡದೆ ಇರುವುದು ಬೇಸರದ ಸಂಗತಿ. ಮುಂದಾದರೂ ಸಹ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರಕುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಕರಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಣಿ ಐಶ್ವರ್ಯ ಡೆವಲಪರ್ಸ್ ಮಾಲೀಕ ಎಚ್.ಎಲ್.ಸತೀಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮಾಡಿರುವ ಸಾಧನೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕಿದೆ. ಆದರೆ, ಅವರ ಸಾಧನೆಗೆ ಸಿಗಬೇಕಾದ ಪ್ರಾಶಸ್ತ್ಯ ಹಾಗೂ ಗೌರವ ಇನ್ನು ಸಿಕ್ಕಿಲ್ಲ ಎಂದು ವಿಷಾದಿಸಿದರು.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್.ಸಂದೀಪ್ ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಸಾಧನೆ ಕುರಿತು ಮಾತನಾಡಿ, ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಕಳಕಳಿ ಹೊಂದಿದ್ದ ನಾಲ್ವರಿ ಮಹಾರಾಜರು ಚಿಕ್ಕವಯಸ್ಸಿನಲ್ಲೇ ಅಪ್ರತಿಮ ಪಾಂಡಿತ್ಯ, ದೂರದೃಷ್ಟಿ, ಸೇವಾ ಮನೋಭಾವನೆ, ತ್ಯಾಗ ಮುಂತಾದ ಹಲವು ವಿಚಾರಗಳನ್ನು ತಿಳಿದಿದ್ದರು. ಅವರು ಕಡೆಯ ದಿನಗಳಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಬಗ್ಗೆ ವಿವರಿಸಿದರು.
ಸ್ವಾತಂತ್ರ್ಯ ನಂತರದಲ್ಲಿ ಆಡಳಿತ ಸರ್ಕಾರ ಅವರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಮನಸ್ಸಿಗೆ ನೋವನ್ನು ಉಂಟು ಮಾಡುತ್ತದೆ ಹಾಗಾಗಿ ವಿದ್ಯಾರ್ಥಿಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನ ಓದುವುದಷ್ಟೇ ಅಲ್ಲದೆ ಅವರನ್ನು ಪ್ರತಿನಿತ್ಯ ಪೂಜಿಸುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಗೌರವ ಸಲ್ಲಿಸಲಾಯಿತು.
ಕಸಾಪ ಮದ್ದೂರು ಘಟಕದ ಅಧ್ಯಕ್ಷ ಕೆ.ಎಸ್.ಸುನಿಲ್ ಕುಮಾರ್, ಎಚ್ ಕೆವಿ ಪದವಿ ಕಾಲೇಜಿನ ಪ್ರಾಂಶುಪಾಲ ಜಿ.ಎಸ್. ಶಂಕರೇಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಸುರೇಂದ್ರ ಹಾಗೂ ಡಾ. ಈರಯ್ಯ, ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.