ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿ ನಡೆಯಿತು.

ಬಳ್ಳಾರಿ: ಇಂದು ನಾವು ಅನುಭವಿಸುತ್ತಿರುವ ಸುಂದರ ಪರಿಸರ, ನೆಲ, ಜಲ, ಭಾಷೆಯ ಶ್ರೀಮಂತಿಕೆಗೆ ಈ ಹಿಂದಿನ ಮಹಾತ್ಮರ ನಿಸ್ವಾರ್ಥ ಕೊಡುಗೆಯೇ ಕಾರಣ ಎಂದು ಮೇಯರ್ ಪಿ. ಗಾದೆಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕೆಂಪೇಗೌಡ ಸೇರಿದಂತೆ ಅನೇಕ ಮಹನೀಯರ ತ್ಯಾಗ ಹಾಗೂ ಹೋರಾಟ ಕುರಿತು ಮನವರಿಕೆ ಮಾಡಿಕೊಡುವ ಕೆಲಸಗಳಾಗಬೇಕು. ಜನಪರ ನಾಡು ಕಟ್ಟಿದವರ ಸ್ಮರಣೆಯ ಜತೆಗೆ ಅಧ್ಯಯನ ಮಾಡುವ ಆಸ್ಥೆ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ವಿಜಯನಗರ ಸಾಮ್ರಾಜ್ಯದ ವೈಭವ, ಅಲ್ಲಿನ ಸಂಪತ್ತು, ಕಟ್ಟಡಗಳು ಹಾಗೂ ದೇವಸ್ಥಾನಗಳನ್ನು ಕಂಡು ಪ್ರೇರಿತರಾಗಿದ್ದ ಕೆಂಪೇಗೌಡರು, ತಾವೂ ಇಂತಹದೊಂದು ಸುಂದರ ನಾಡನ್ನು ಕಟ್ಟಬೇಕೆಂಬ ಕನಸು ಕಂಡಿದ್ದರು.

ಈಗಿನ ಯುವಪೀಳಿಗೆ ಕೆಂಪೇಗೌಡರಂತೆಯೇ ನಾಡು ಕಟ್ಟಬೇಕೆಂದೇನಿಲ್ಲ. ಸಮಾಜದಲ್ಲಿ ಉತ್ತಮ ನಾಗರಿಕರಾದರೆ ಸಾಕು. ಅಧ್ಯಯನದ ಪರಿಶ್ರಮ ಮೂಲಕ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದು ನಿಸ್ವಾರ್ಥದಿಂದ ಸೇವೆ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಶಶಿಕಾಂತ ಅವರು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಳ್ಳಾರಿಯ ಎಸ್. ಲಕ್ಷ್ಮಿ ಪವನ್ ಕುಮಾರ್ ಮತ್ತು ತಂಡದವರು ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಿರೀಶ್ ಕುಮಾರ್ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಕಾಂಗ್ರೆಸ್ ಮುಖಂಡ ವಿಷ್ಣು ಬೋಯಪಾಟಿ, ಜೆ.ವಿ. ಮಂಜುನಾಥ ಇದ್ದರು. ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.