ಯುವಸಮೂಹಕ್ಕೆ ಸಂತರ ಇತಿಹಾಸ ತಿಳಿಸುವುದು ಅವಶ್ಯ

| Published : Jul 07 2025, 12:17 AM IST

ಯುವಸಮೂಹಕ್ಕೆ ಸಂತರ ಇತಿಹಾಸ ತಿಳಿಸುವುದು ಅವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರದಲ್ಲಿದ್ದ ವೀರಪ್ಪಯ್ಯ ತಾತನವರು ಮಠಕ್ಕೆ ಬರುವ ಭಕ್ತರಿಗೆ ಬಿಲ್ಪತ್ರಿ ನೀಡುವ ಮೂಲಕ ಭಕ್ತರ ಬೇಡಿಕೆ ಈಡೇರಿಸುವ ಮಹಾತಪಸ್ವಿಗಳಾಗಿದ್ದರು. ಇಂತಹ ಮಹಾತಪಸ್ವಿಗಳ ಕೃತಿಯನ್ನು ಹೊರಗೆ ತಂದಿರುವುದು ಪ್ರಶಂಸನೀಯವಾಗಿದೆ.

ಗಂಗಾವತಿ:

ಯುವಸಮೂಹಕ್ಕೆ ಮಹನೀಯರ, ಸಂತ-ಶರಣರ ಇತಿಹಾಸ ತಿಳಿಸುವುದು ಅವಶ್ಯವಾಗಿದೆ ಎಂದು ಮಾಜಿ ಸಂಸದ ಎಚ್.ಜಿ. ರಾಮುಲು ಹೇಳಿದರು.

ನಗರದ ಸುಶಮೀಂದ್ರ ಗುರುಕುಲ ಭವನದಲ್ಲಿ ಸಾಹಿತಿ ಎಸ್ ವಿ. ಪಾಟೀಲ್ ಪ್ರಕಟಿಸಿದ ಸಿದ್ದಾಪುರ ಹಿರೇಮಠದ ವೀರಪ್ಪಯ್ಯ ತಾತನವರ ಚರಿತಾಮೃತದ 2ನೇ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಿದ್ದಾಪುರದಲ್ಲಿದ್ದ ವೀರಪ್ಪಯ್ಯ ತಾತನವರು ಮಠಕ್ಕೆ ಬರುವ ಭಕ್ತರಿಗೆ ಬಿಲ್ಪತ್ರಿ ನೀಡುವ ಮೂಲಕ ಭಕ್ತರ ಬೇಡಿಕೆ ಈಡೇರಿಸುವ ಮಹಾತಪಸ್ವಿಗಳಾಗಿದ್ದರು. ಇಂತಹ ಮಹಾತಪಸ್ವಿಗಳ ಕೃತಿಯನ್ನು ಹೊರಗೆ ತಂದಿರುವುದು ಪ್ರಶಂಸನೀಯವಾಗಿದೆ ಎಂದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಪ್ರಭಾರಿ ಅಧ್ಯಕ್ಷ ಎನ್.ಎಸ್. ಪಾಟೀಲ್, ನಮ್ಮ ತಂದೆಗೆ ಕಾಯಿಲೆ ಬಂದಾಗ ನಿವಾರಣೆ ಮಾಡಿದ ಮಹಾತಪಸ್ವಿಯಾಗಿದ್ದರು ಎಂದು ಸ್ಮರಿಸಿದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಾಹಿತಿ ಎಸ್‌.ವಿ. ಪಾಟೀಲ್ ಅವರು ಹಲವು ಪುಸ್ತಕ ಹೊರಗೆ ತರುವ ಮೂಲಕ ಈ ಭಾಗದಲ್ಲಿ ಇತಿಹಾಸ ಉಳಿಸುವ ಕಾರ್ಯ ಮಾಡಿದ್ದಾರೆ. ಅದರಲ್ಲೂ ಶ್ರೀಗಳ ಲೇಖನಗಳು ಸೇರಿದಂತೆ ಅವರ ಪವಾಡವನ್ನು ಲೇಖನ ಮೂಲಕ ಭಕ್ತರಿಗೆ ತಿಳಿಸುವ ಕಾರ್ಯ ಮಾಡಿರುವುದು ಸಂತೋಷವಾಗಿದೆ ಎಂದರು.

ಸಾಹಿತಿ ಎಸ್.ವಿ. ಪಾಟೀಲ್ ಗುಂಡೂರು ಮಾತನಾಡಿ, ಹಲವು ವರ್ಷಗಳಿಂದ ಶ್ರೀ, ಜನಪ್ರತಿನಿಧಿಗಳ, ಅಧಿಕಾರಿಗಳು ಸೇರಿದಂತೆ ಎಲೆ ಮರೆ ಕಾಯಿಯಂತೆ ಇರುವ ಸಾಧಕರ ಪರಿಚಯ, ಅಭಿನಂದನಾ ಗ್ರಂಥ ಹೊರಗೆ ತಂದಿದ್ದೇನೆ. ಜತೆಗೆ ನಾಟಕ ರಚಿಸಿದ್ದೇನೆ ಎಂದರು.ಬಳ್ಳಾರಿಯ ಅಣ್ಣ ಹಜಾರೆ ಫೌಂಡೇಶನ್ ಅಧ್ಯಕ್ಷ ರಾಜಶೇಖರ ಮುಲಾಲಿ ಮಾತನಾಡಿ, ಬಳ್ಳಾರಿಯಲ್ಲಿ ನಡೆಯುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಸಾಹಿತಿ ಬಾನು ಮೂಷ್ತಾಕ್‌ ಆಯ್ಕೆಗೆ ಬಳ್ಳಾರಿ ಭಾಗದ ಸಾಹಿತಿಗಳು ಆಕ್ಷೇಪಿಸಿದ್ದಾರೆ. ಇದೇ ಭಾಗದ ಸಾಹಿತಿಯಾಗಿರುವ ಗುಂಡೂರು ಅವರನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿದರು. ಉತ್ತಂಗಿ ಸೋಮಶೇಖರ ಸ್ವಾಮೀಜಿ, ನಂದಿಪುರದ ಡಾ. ಮಹೇಶ್ವರ ಸ್ವಾಮೀಜಿ, ಸಿದ್ದಾಪುರ ಹಿರೇಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶರಣಪ್ಪ ಮೆಟ್ರಿ, ವಕೀಲ ವೈಜನಾಥಸ್ವಾಮಿ, ಬಸವರಾಜ ದೊಡ್ಡನಗೌಡ ಹಳೇಮನಿ, ಸಿ. ಮಹಾಲಕ್ಷ್ಮೀ, ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ ಕೂಡ್ಲಿಗಿ ಇದ್ದರು.