ಕನ್ನಡಪ್ರಭ ವಾರ್ತೆ ಲೋಕಾಪುರ ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಡಾ.ನಾಗರಾಜ ನಾಡಗೌಡ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಡಾ.ನಾಗರಾಜ ನಾಡಗೌಡ್ರ ಹೇಳಿದರು.ಪಟ್ಟಣದ ಬಿ.ವೀ.ವಿ ಸಂಘದ ಮಹಿಳಾ ಪದವಿ ಪೂರ್ವ ಕಾಲೇಜು ಕನ್ನಡ ಸಂಘದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಜನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಭಾವನೆ ಮತ್ತು ಆಸ್ಮಿತೆಯ ಪ್ರತೀಕವಾಗಿದೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಓದುವ ಜೊತೆಗೆ ಕನ್ನಡದ ಜನಪದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು. ಯುವಜನತೆ ಕನ್ನಡ ಭಾಷೆಯ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾಷೆಯ ಬೆಳವಣೆಗೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಜನಪದ ಕಲಾವಿದ ಬಿ.ಬಿ.ಮೆಳ್ಳಿಗೇರಿ ಮಾತನಾಡಿ, ಜನಪದ ಸಾಹಿತ್ಯ ಜನಸಾಮಾನ್ಯರ ಬದುಕಿನ ಅನುಭವ, ನಂಬಿಕೆ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳ ಪ್ರತಿಬಿಂಬವಾಗಿದೆ. ಜನಪದ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲೆರ ಮೇಲಿದೆ. ವಿದ್ಯಾಥಿಗಳು ಜನಪದ ಕಲೆಗಳನ್ನು ಕಲಿತು, ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.ಮುಖ್ಯಶಿಕ್ಷಕ ಶಿವಾನಂದ ಹುದ್ದಾರ ಮಾತನಾಡಿ, ಕನ್ನಡ ಸಂಘ ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ, ಸಾಹಿತ್ಯಾಶಕ್ತಿ ಹಾಗೂ ಸೃಜನಶೀಲತೆಯನ್ನು ಬೆಳೆಸುವ ವೇದಿಕೆಯಾಗಬೇಕು. ಶಿಕ್ಷಣ ಜೊತೆಗೆ ನಮ್ಮ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯ. ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುವುದು ಎಂದರು.
ಕಾಲೇಜು ಒಕ್ಕೂಟದ ಉಪಾಧ್ಯಕ್ಷ ಎಂ.ಎಲ್.ನಾಯ್ಕ ಮಾತನಾಡಿ, ಕನ್ನಡ ಸಂಘದ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವಲ್ಲಿ ಸಹಕಾರಿಯಾಗಲಿ ಎಂದು ಶುಭಹಾರೈಸಿದರು. ಬಿಜಿಎಚ್ಎಸ್‌ನ ಮುಖ್ಯೋಪಾಧ್ಯಾಯ ಶಿವನಗೌಡ ಪಾಟೀಲ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ವೈ.ಐ.ಜಂಬಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಜನಪದ ಪರಂಪರೆ, ಸಾಹಿತ್ಯ ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಹಾಡುಗಳು, ನೃತ್ಯ, ಸಂಗೀತ ಹಾಗೂ ಡೊಳ್ಳುಗಳ ಸದ್ದು ಮೆರಗು ತಂದವು. ಸಾನಿಧ್ಯವನ್ನು ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ವಹಿಸಿದ್ದರು. ವೈ.ಐ.ಜಂಬಗಿ, ಆರ್.ಎಚ್.ತೋಳಮಟ್ಟಿ ಉಪಸ್ಥಿತರಿದ್ದರು. ಯಶೋಧಾ ಕಂಬಲಿ ಹಾಗೂ ಸೃಷ್ಟಿ ರಾಠೋಡ ನಿರೂಪಿಸಿ, ವಂದಿಸಿದರು.