ಸಿಕ್ಕ ಸ್ಥಾನಮಾನ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ: ಅನ್ನದಾನೇಶ

| Published : Feb 12 2024, 01:31 AM IST

ಸಾರಾಂಶ

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಧ್ಯಾಹ್ನದ ನಂತರ ಜರುಗಿದ ಗೋಷ್ಠಿಗಳು ಗಮನ ಸೆಳೆದವು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಹಾವೇರಿ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮಧ್ಯಾಹ್ನದ ನಂತರ ಜರುಗಿದ ಗೋಷ್ಠಿಗಳು ಗಮನ ಸೆಳೆದವು.

ಕನ್ನಡ-ಕರ್ನಾಟಕ- ವೈಭವ ಶೀರ್ಷಿಕೆಯಡಿ ಜರುಗಿದ ಗೋಷ್ಠಿ ಒಂದರಲ್ಲಿ ಕರ್ನಾಟಕ 50 ಸಂಭ್ರಮ-ಸಂದಿಗ್ಧತೆಗಳು ಕುರಿತು ಮಾತನಾಡಿದ ಬೆಂಗಳೂರಿನ ಡಾ. ಬಿ.ಎ. ಅನ್ನದಾನೇಶ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ಬಳಿಕ ಅದನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕನ್ನಡವನ್ನು ತಂತ್ರಜ್ಞಾನಕ್ಕೆ ಅಳವಡಿಸಿಕೊಳ್ಳಬೇಕಿದೆ. ಜೊತೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗಾವಕಾಶ ಕಲ್ಪಿಸುವ ವಾತಾವರಣ ಸೃಷ್ಟಿಸಬೇಕಿದೆ ಎಂದರು.

ಕರ್ನಾಟಕ ಐತಿಹಾಸಿಕ ಪರಂಪರೆ ಕುರಿತು ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು.

ಕನ್ನಡ ನುಡಿ ಪರಂಪರೆ ಕುರಿತು ಡಾ.ಕಾಂತೇಶ ಅಂಬಿಗೇರ ಮತ್ತು ಡಾ. ಸುಭಾಷ್ ಚನ್ನಗೌಡ್ರ ಮಾತನಾಡಿದರು. ಡಾ.ಎಸ್.ಜಿ. ವೈದ್ಯ ಅಧ್ಯಕ್ಷತೆ ವಹಿಸಿದ್ದರು.

ಎರಡನೇ ಗೋಷ್ಠಿ ಜಿಲ್ಲೆಯ ಗತ ವೈಭವ ಶೀರ್ಷಿಕೆಯಡಿ ಜಿಲ್ಲೆಯ ಪ್ರವಾಸಿ ತಾಣಗಳು ಕುರಿತು ಉಪನ್ಯಾಸಕ ಪ್ರಮೋದ ನಲವಾಗಲ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಲಿಂಗರಾಜ ಕಮ್ಮಾರ ಅವರು ಜಿಲ್ಲೆಯ ಚಳವಳಿಗಳು, ಜಿಲ್ಲೆಯ ಜಾನಪದ ಪರಂಪರೆ ಮತ್ತು ಸಂಸ್ಕೃತಿ ಕುರಿತು ಡಾ. ಕಾಂತೇಶರಡ್ಡಿ ಗೋಡಿಹಾಳ, ಜಿಲ್ಲೆಯ ಧಾರ್ಮಿಕ ಪರಂಪರೆಗಳು ವಿಷಯದ ಕುರಿತು ಮಾತನಾಡಿದರು.

ವಿಶ್ರಾಂತ ಪ್ರಾಧ್ಯಾಪಕ ಮಾರುತಿ ಶಿಡ್ಲಾಪುರ ಆಶಯ ನುಡಿಗಳನ್ನಾಡಿದರು. ವಿಶ್ರಾಂತ ಪ್ರಾಚಾರ್ಯ ಎನ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿ ಮೂರರಲ್ಲಿ ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜಿ.ಬಿ. ಮಾಸಣಗಿ ಮಾತನಾಡಿದರು.

ಗೋಷ್ಠಿ ನಾಲ್ಕರಲ್ಲಿ ಕವಿಗಳ ಕಲರವ ಶೀರ್ಷಿಕೆಯಡಿ ಜಿಲ್ಲೆಯ ಕವಿಗಳು ತಮ್ಮ ಕವನ ವಾಚಿಸಿದರು.

ಸಮ್ಮೇಳನಾಧ್ಯಕ್ಷ ಜೆ.ಎಂ. ಮಠದ, ಎಸ್.ಎನ್. ದೊಡ್ಡಗೌಡ್ರ, ಸಿ.ಎಸ್. ಮರಳಿಹಳ್ಳಿ, ಎಸ್.ಎಂ. ಬಡಿಗೇರ, ಚಂದ್ರಶೇಖರ ಜಾಡರ, ಕೃಷ್ಣರಾಜ ವರ್ಣೇಕರ ಉಪಸ್ಥಿತರಿದ್ದರು.

ಮಳಿಗೆಗಳಿಗೆ ಮುಗಿಬಿದ್ದ ಜನತೆ:

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾನುವಾರ ಎಪಿಎಂಸಿ ಸಮುದಾಯ ಭವನದ ಆವರಣದಲ್ಲಿ ಹಾಕಿರುವ ವಿವಿಧ ಮಳಿಗೆಗಳು ಆಕರ್ಷಣೆಯಾಗಿದ್ದವು.

ಮಳಿಗೆ ಆರಂಭದಲ್ಲಿಯೇ ರಕ್ತದಾನ ಶಿಬಿರ ಜಾಗೃತಿ ಮೂಡಿಸಿ ಸ್ವಾಗತ ಕೋರಲಾಯಿತು. ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಚಿತ್ರಕಲಾ ಶಿಕ್ಷಕ ಮಾಲತೇಶ ಗರಡಿಮನಿ ಅವರ ಚಿತ್ರಕಲೆಗಳ ಪ್ರದರ್ಶನ, ಚಿತ್ರಕಲಾ ಕರಪತ್ರಗಳು ಮಹಿಳೆಯರ ಹಾಗೂ ಮಕ್ಕಳ ಖುಷಿ ತಂದವು.

ಸಹಜ ಯೋಗ ಆಧ್ಯಾತ್ಮಿಕ ಧ್ಯಾನದಲ್ಲಿ ಜನರಿಗೆ ಯೋಗ ಹಾಗೂ ಧ್ಯಾನ ಬಗ್ಗೆ ಅರಿವು ಮೂಡಿಸಲಾಯಿತು. ಕೈಮಗ್ಗ ನೇಕಾರರ ಉತ್ಪಾದಕರ ಮಾರಾಟ ಮಳಿಗೆಯಲ್ಲಿ ಕಾಟನ್ ಹಾಗೂ ಇಲಕಲ್ಲ ಸೀರೆಗಳನ್ನು ಮಹಿಳೆಯರು ಖರೀದಿ ಮಾಡುತ್ತಿರುವುದು ಕಂಡುಬಂತು. ಬ್ಯಾಗಲ್ಸ್ ಮಳಿಗೆಯಲ್ಲಿ ಯುವತಿಯರು ದಂಡು ಹೆಚ್ಚಾಗಿತ್ತು. ರಂಗ ಕುಸುಮ ಹಾಗೂ ಸನಾತನ ಸಂಸ್ಥೆಯ ಪುಸ್ತಕ ಮಳಿಗೆಗಳನ್ನು ಜನರು ವೀಕ್ಷಿಸಿದರು.