ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕ ಗೌರವ ಇದ್ದರೂ, ರಾಜ್ಯ ಸರ್ಕಾರದ ವಿರುದ್ಧ ಅನಾವಶ್ಯಕ ಟೀಕೆ ಮಾಡುತ್ತಿರುವುದು ಸರಿಯಲ್ಲ. ಸಮಾವೇಶ ಮಾಡುವುದು ಅವರ ಪಕ್ಷದ ವಿಚಾರವಾದರೂ, ಕಾಂಗ್ರೆಸ್ ಸರ್ಕಾರ, ಸಿಎಂ ಹಾಗೂ ಡಿಸಿಎಂ ವಿರುದ್ಧ ಆಧಾರರಹಿತ ಆರೋಪ ಮಾಡುವ ನೈತಿಕತೆ ಅವರಿಗಿಲ್ಲ .
ಕನ್ನಡಪ್ರಭ ವಾರ್ತೆ ಹಾಸನ
ನನಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಗೌರವವಿದೆ. ಹಾಸನದಲ್ಲಿ ಪಕ್ಷದ ಸಮಾವೇಶ ಮಾಡುತ್ತಿರುವುದು ಅವರ ವೈಯಕ್ತಿಕ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ಮತ್ತು ದಾಖಲೆ ರಹಿತ ಆರೋಪ ಮಾಡುತ್ತಿರುವುದನ್ನು ಖಂಡಿಸುವುದಾಗಿ ಸಂಸದ ಶ್ರೇಯಸ್ ಎಂ. ಪಟೇಲ್ ವಾಗ್ದಾಳಿ ನಡೆಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕ ಗೌರವ ಇದ್ದರೂ, ರಾಜ್ಯ ಸರ್ಕಾರದ ವಿರುದ್ಧ ಅನಾವಶ್ಯಕ ಟೀಕೆ ಮಾಡುತ್ತಿರುವುದು ಸರಿಯಲ್ಲ. ಸಮಾವೇಶ ಮಾಡುವುದು ಅವರ ಪಕ್ಷದ ವಿಚಾರವಾದರೂ, ಕಾಂಗ್ರೆಸ್ ಸರ್ಕಾರ, ಸಿಎಂ ಹಾಗೂ ಡಿಸಿಎಂ ವಿರುದ್ಧ ಆಧಾರರಹಿತ ಆರೋಪ ಮಾಡುವ ನೈತಿಕತೆ ಅವರಿಗಿಲ್ಲ ಎಂದರು.
ಕಾಂಗ್ರೆಸ್‌ನಿಂದ ಸಹಾಯ ಪಡೆದಿದ್ದ ಕುಮಾರಸ್ವಾಮಿ ಅವರು ಈಗ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಮೊದಲು ಯಾರ ಜೊತೆ ಇದ್ದರು, ಈಗ ಯಾರ ಜೊತೆ ಇದ್ದಾರೆ ಎಂಬುದು ಜನತೆಗೆ ತಿಳಿದಿದೆ. ಸಮಾವೇಶ ಮಾಡುವ ಮೊದಲು ಅವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು ಎಂದು ಕುಟುಕಿದರು.ಕೇಂದ್ರದಲ್ಲಿ ಸಚಿವರಾಗಿದ್ದರೂ ಜಿಲ್ಲೆಗೆ ಬೇಕಿರುವ ಐಐಟಿ, ಕಾಡಾನೆ ಸಮಸ್ಯೆ, ಭದ್ರಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಕೇಂದ್ರದ ಮಟ್ಟದಲ್ಲಿ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ಎರಡು ದೊಡ್ಡ ಸಮಾವೇಶಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಪ್ರತಿಯಾಗಿ ಸಮಾವೇಶ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ ಎಂದರು.
ಇದೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಬನವಾಸೆ ರಂಗಸ್ವಾಮಿ , ಪಕ್ಷದ ಮುಖಂಡರಾದ ದೇವರಾಜೇಗೌಡ, ಬಿ.ಕೆ. ರಂಗಸ್ವಾಮಿ, ದಾಸರಕೊಪ್ಪಲು ರಘು, ರಂಜಿತ್ ಗೊರೂರು, ಕೊಲ್ಲಳ್ಳಿ ಸಲೀಂ, ಶಶಿಧರ್, ಅಬ್ದೂಲ್ ಕಯಿಂ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.