ಕೊಪ್ಪಳ: ಕಾರ್ಖಾನೆ ದುಷ್ಪರಿಣಾಮದಿಂದ ಬಳಲುತ್ತಿರುವ ಜನರನ್ನು ಕಂಡೂ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಳ್ಳುವುದು ಸರಿಯಲ್ಲ ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.

ನಗರದ ನಗರಸಭೆ ಮುಂದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜರುಗಿದ ಕೊಪ್ಪಳ, ಭಾಗ್ಯನಗರದ ಪ್ರತಿಭಟನಾ ಬಂದ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜನರ ಕೂಗನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಇಲ್ಲಿನ ಜನಪ್ರತಿನಿಧಿಗಳು ಕೈಗಾರಿಕಾ ಬಾಧಿತ ಹಳ್ಳಿಗೆ ಹೋಗಿಲ್ಲ ಎನ್ನುವ ಕೂಗು ಇದೆ. ನಮಗೆ ಜೀವ, ಬದುಕು ಮುಖ್ಯ. ನೆಲ, ಜಲ, ವಾಯು ಕಲುಷಿತವಾಗಿದೆ. ಗಾಂಧೀಜಿ ಈಗ ಇದ್ದಿದ್ದರೆ ಸರ್ಕಾರಕ್ಕೆ‌ ಛೀಮಾರಿ ಹಾಕುತ್ತಿದ್ದರು. ಸರ್ಕಾರ ಜನರ‌ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಸಂಸದ, ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿದಿದ್ದರೆ ನಿಮಗೆ ಮತ ಹಾಕದೇ ಬಹಿಷ್ಕಾರ ಮಾಡಲಾಗುವುದು. ನಮ್ಮದೇ ಒಬ್ಬ ವ್ಯಕ್ತಿ ಚುನಾವಣೆಗೆ ನಿಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗದಗ ತೋಂಟದ ಸಿದ್ದರಾಮ ಶ್ರೀಗಳು ಮಾತನಾಡಿ, ಹೋರಾಟದ ಮೂಲಕವೇ ಎಲ್ಲವನ್ನು ಪಡೆಯಬೇಕು. ಇದೊಂದು ವಿಚಿತ್ರದ ಕಾಲವಾಗಿದೆ. ಗಣಿಗಾರಿಕೆ ನಡೆಯಬಾರದು ಎಂದು ನಿರಂತರ ಹೋರಾಟ ಮಾಡಿದೆ. ಗಣಿಗಾರಿಕೆ ನಿಂತು ಹೋಗಿದೆ. ಹೋರಾಟದಿಂದ ಇದು ಸಾಧ್ಯವಾಗಿದೆ. ಗದಗ ಭಾಗದಲ್ಲಿ ಪೋಕ್ಸೋ ಕಂಪ‌ನಿ ಒದ್ದು ಓಡಿಸುವ ಕೆಲಸ ಮಾಡಿದ್ದು ನಮ್ಮ ಜ‌ನರು. ಸರ್ಕಾರದ ಮುಖ್ಯ ಗುರಿ ಜನ ಕಲ್ಯಾಣ ಮಾಡುವುದು. ಬಂಡವಾಳ ಶಾಹಿಪರ ನಿಲ್ಲುವುದು ಅಲ್ಲ. ಮುಂದೆ ಇದೇ ರೀತಿಯಾದರೆ ಇನ್ನಷ್ಟು ಸಮಸ್ಯೆ ಉಲ್ಭಣಗೊಳ್ಳಲಿದೆ. ಕಾರ್ಖಾನೆ ಬಾಧಿತ ಪ್ರದೇಶ ನಾವು ನೋಡಿದ್ದೇವೆ. ಇಲ್ಲಿನ ಪರಿಸರದ ಸ್ಥಿತಿ ನಾವು ನೋಡಿದ್ದೇವೆ. ಈ ಹೋರಾಟ ಜನಾಂದೋಲನವಾಗಿ ರೂಪವಾಗಲಿ ಎಂದರು.

ಜೀವರ್ಗಿಯ ಕರಿಬಸವ ಸ್ವಾಮೀಜಿ ಮಾತನಾಡಿ, ಕೊಪ್ಪಳದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಹೋರಾಟ ಜನರಿಗೆ ತಿಳಿದಿಲ್ಲವೇ? ಕೊಪ್ಪಳದ ರಾಜಕಾರಣಿಗಳಿಗೆ ಇಲ್ಲಿ ಮನಸ್ಸು ಕಲಕಲಿಲ್ಲವಾ ? ಈ ಸಮಾಜದಲ್ಲಿ ಕಣ್ಣೀರು ಒರೆಸುವವರ ಜತೆ ನಿಂತವರೇ ದೊಡ್ಡವರು. ಭಿಕ್ಷೆ ಕೊಟ್ಟರೆ ಸ್ವಾಮಿಗಳು ಬದುಕುತ್ತಾರೆ. ಜನರ ಮತದ ಭಿಕ್ಷೆ ಪಡೆದು ಶಾಸಕರು ಆಯ್ಕೆಯಾಗುತ್ತಾರೆ. ಜನ ರೊಚ್ಚಿಗೇಳುವ ಮೊದಲು ನ್ಯಾಯ ಒದಗಿಸಬೇಕು. ಜನ ಶಕ್ತಿ ಮುಂದೆ ಇದ್ಯಾವುದೂ ನಿಲ್ಲಲ್ಲ. ಕಾರ್ಖಾನೆಗಳ ಒದ್ದು ಹೋಡಿಸುವ ಕೆಲಸ ಮಾಡಬೇಕು. ಓಟು ಬೇಕಾದಾಗ ಬರುವ ಶಾಸಕರು ಜನರಿಗೆ ಘಾಸಿ ಮಾಡುವುದು ಸರಿಯಲ್ಲ ಎಂದರು.

ಶಿಕ್ಷಣ ಉಳಿಸಿ ಹೋರಾಟ ಸಮಿತಿ ಮುಖಂಡ ರಾಜಶೇಖರ ಮಾತನಾಡಿದರು.


ಕಂಪಸಾಗರದ ಅಭಿನವ ನಾಗಮೂರ್ತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.