ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವ್ಯಕ್ತಿತ್ವ ಹಾಳು ಮಾಡುವ ಗಗನಚುಂಬಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಆದರೆ ವ್ಯಕ್ತಿತ್ವ ನಿರ್ಮಿಸುವ ಸ್ಮಾರಕ ನಿರ್ಮಾಣಕ್ಕೆ ಅಡೆತಡೆ ಸರಿಯಲ್ಲ ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದರು.ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಭಾನುವಾರ ರಾಮಕೃಷ್ಣ- ವಿವೇಕಾನಂದ ಭಾವಪ್ರಚಾರ ಪರಿಷತ್ ಆಯೋಜಿಸಿದ್ದ 9ನೇ ವಾರ್ಷಿಕ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಮೈಸೂರಿನಲ್ಲಿ ವಿವೇಕಾನಂದರು ಬಂದು ಹೋಗಿದ್ದರು. ಮಹಾರಾಜರನ್ನೂ ಭೇಟಿಯಾಗಿದ್ದರು. ಅವರು ಉಳಿದು ಹೋದ ಜಾಗಗಳು ಭಾವದೀಪ್ತಿಯಾಗಿವೆ. ಇಲ್ಲಿ ವಿವೇಕ ಯುವ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ವಿಳಂಬ ಆದರೆ ಅದರಿಂದ ಯುವಜನರಿಗೇ ನಷ್ಟ. ವ್ಯಕ್ತಿತ್ವ ಹಾಳು ಮಾಡುವ ಗಗನಚುಂಬಿ ಕಟ್ಟಡಗಳು ತಲೆ ಎತ್ತುತ್ತಲೇ ಇವೆ. ಆದರೆ ವ್ಯಕ್ತಿತ್ವ ನಿರ್ಮಿಸುವ ಸ್ಮಾರಕ ನಿರ್ಮಾಣಕ್ಕೆ ಅಡೆತಡೆ ಸರಿಯಲ್ಲ. ತ್ವರಿತವಾಗಿ ಆ ನಿರ್ಮಾಣ ಕಾರ್ಯ ನಡೆಯಬೇಕು. ಯುವಜನರ ವ್ಯಕ್ವಿತ್ವ ರೂಪಿಸುವ ಕೇಂದ್ರ ಆಗಬೇಕು ಎಂದರು.ವೇದ, ಉಪನಿಷತ್ ಗಳು ದಾರಿ ತೋರಲು ಇರುವ ಪಂಜುಗಳು.ಸತ್ಯವೇ ಮೂರ್ತವೆತ್ತ ರೂಪದಲ್ಲಿ ಪರಮಹಂಸರು- ವಿವೇಕಾನಂದರು ಬದುಕಿದರು. ಎಲ್ಲಾ ಕಾಲಕ್ಕೂ ಅವರ ಮಾತುಗಳು, ವಿಚಾರಗಳು ಪ್ರಸ್ತುತವಾಗಿವೆ. ಅವರ ವಿಚಾರಗಳು ನಮ್ಮ ಮನಸ್ಸಿಗೆ ಬಂದದ್ದೇ ಆದಲ್ಲಿ ಬದುಕು ಬೆಳಗುತ್ತದೆ. ದೇಶವೇ ದಾಸ್ಯದಲ್ಲಿ ಮುಳುಗಿದ್ದ ವೇಳೆ ಹಿಂದೂ ಧರ್ಮಕ್ಕೆ ಗೌರವ ತಂದುಕೊಟ್ಟಿದ್ದು ವಿವೇಕಾನಂದರು. ಅದಕ್ಕೆ ಪ್ರೇರಣೆ ಆದದ್ದು ಪರಮಹಂಸರು ಎಂದರು.
ಅಮೆರಿಕಾ ಪ್ರವಾಸ ಮುಗಿಸಿ ವಾಪಸ್ ಬಂದಾಗ 1892ರಲ್ಲಿ ಚೆನ್ನೈನಲ್ಲಿ ಕೆ.ಎಚ್. ರಾಮಯ್ಯ ವಿವೇಕಾನಂದರಿಂದ ತತ್ವದಿಂದ ಪ್ರಭಾವಗೊಂಡು ತಮ್ಮ ಸಮುದಾಯದ ಸಂಘಟನೆ ಮಾಡಿದರು. ಕೇಂದ್ರ ಒಕ್ಕಲಿಗ ಸಂಘವು ನಂತರದಲ್ಲಿ ಅಸ್ತಿತ್ವಕ್ಕೆ ಬಂತು ಎಂಬುದಾಗಿ ಅವರು ತಿಳಿಸಿದರು.ಗದಗ- ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ನಮ್ಮ ಸರ್ಕಾರಗಳು ಇನ್ನೂ ಜಾಗೃತ ಆಗಿಲ್ಲ. ಹೀಗಾಗಿ ಪ್ರಜ್ಞಾವಂತ ಸಮಾಜದವರೇ ಈ ರೀತಿ ಕಾರ್ಯಕ್ರಮಗಳ ಆಯೋಜನೆಯನ್ನು ಮನಗಾಣಬೇಕು. ಸಮಾಜಕ್ಕೆ ಉಪಯುಕ್ತವಾದ ಆಲೋಚನೆಗಳನ್ನು, ಯೋಜನೆಗಳನ್ನು ನೀಡಬೇಕು ಎಂದರು.
ಹಿಂದುಗಳಲ್ಲಿ ಶಕ್ತಿಯುತ ಐಡಿಯಾಗಳನ್ನು ಮನಗಾಣಬೇಕು. ಉಪನಿಷತ್ತುಗಳು ಅದನ್ನು ನಮಗೆ ಈಗಾಗಲೇ ಕೊಟ್ಟಿವೆ. ವ್ಯಕ್ತಿತ್ವ ಬದಲಾಗದಿದ್ದರೆ ಸಮಾಜದ ಬದಲಾವಣೆ ಸಾಧ್ಯವಿಲ್ಲ. ರಾಷ್ಟ್ರದ ಬದಲಾವಣೆ ಎಂದಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.ರಾಣೆಬನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಪ್ರಕಾಶನಾಂದಜೀ ಮಹರಾಜ್ಮಾತನಾಡಿ, ಸಮಾಜಕ್ಕೆ ಮಹಾತ್ಮರ ಸಂದೇಶಗಳು ಹಿಂದಿಗಿಂತ ಹೆಚ್ಚು ಅಗತ್ಯ ಇದೆ. ಯಾವುದೇ ಜಾತಿಬೇಧವಿಲ್ಲದೇ ಪರಮಹಂಸ- ವಿವೇಕಾನಂದರ ಸಂದೇಶಗಳು ಎಲ್ಲರನ್ನೂ ತಲುಪಬೇಕಿದೆ. ಕುವೆಂಪು ಅವರಿಗೆ ವಿಶ್ವಮಾನವ ತತ್ವಕ್ಕೆ ವಿವೇಕಾನಂದರೇ ಪ್ರೇರಣೆ. ವಿವೇಕಾನಂದರ ಸಂಪರ್ಕಕ್ಕೆ ಬಂದ ಎಲ್ಲರೂ ವಿಶ್ವಮಾನವರಾಗಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ ಎಂದರು.
ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಮಾತನಾಡಿ, ಶಾರದಾಮಾತೆ, ಪರಮಹಂಸರು ಹಾಗೂ ವಿವೇಕಾನಂದರು ಮೂವರ ಧರ್ಮಗಳ ಸಾರ್ವತ್ರಿಕ ಸಾಮರಸ್ಯ ಎಂದು ಪರಮಹಂಸರು ನಂಬಿದ್ದರು. ವಿಭಿನ್ನ ಮಾರ್ಗಗಳ ಮೂಲಕ ದೇವರ ಸಾಕ್ಷಾತ್ಕಾರ. ಭಕ್ತಿ, ಧ್ಯಾನ, ಜ್ಞಾನ ಅವರ ದೈವಿಕ ಮಾರ್ಗಗಳಾಗಿದ್ದವು. ದೇವರೊಂದಿಗೆ ಆತ್ಮೀಯ ಸಂಬಂಧ ಅವರ ಪ್ರತಿಪಾದನೆ ಆಗಿತ್ತು ಎಂದು ತಿಳಿಸಿದರು.ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಮುಕ್ತಿದಾನಂದಜಿ, ವಿಜವಾಡದ ವಿನಿಶ್ಚಲಾನಂದಜಿ, ದಾವಣಗೆರೆ ಆಶ್ರಮದ ತ್ಯಾಗಿಶ್ವರಾನಂದಜಿ, ತುಮಕೂರಿನ ವಿರೇಶಾನಂದ ಸರಸ್ವತಿ ಸ್ವಾಮೀಜಿ, ರಾಣೆಬೆನ್ನೂರಿನ ಪ್ರಕಾಶಾನಂದಜಿ, ಹಲಸೂರುಬದ ಬೋಧಸ್ವರೂಪಾನಂದಜಿ, ಮಾಜಿ ಮೇಯರ್ ಸುನಂದಾ ಪಾಲನೇತ್ರ ಮೊದಲಾದವರು ಇದ್ದರು.