ಮಠಕ್ಕೆ ಕೆಲವರಿಂದ ಕಳಂಕ ತರುವ ಕೆಲಸ ಸರಿಯಲ್ಲ

| Published : Sep 13 2024, 01:33 AM IST

ಸಾರಾಂಶ

ಇತ್ತೀಚೆಗೆ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಕೆಲವರು ಪೀಠಾಧಿಪತಿ ವಿರುದ್ಧ ಸಭೆ ನಡೆಸಿ ಶ್ರೀಮಠದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಸರಿಯಲ್ಲ.

ಸಂಸ್ಥಾನ ಹಿರೇಮಠದ ಭಕ್ತರ ಆಕ್ಷೇಪ, ಶ್ರೀಗಳ ಮನಸ್ಸಿಗೆ ನೋವುಂಟು ಮಾಡಿದರೆ ಕಾನೂನು ಮೊರೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಇತ್ತೀಚೆಗೆ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಕೆಲವರು ಪೀಠಾಧಿಪತಿ ವಿರುದ್ಧ ಸಭೆ ನಡೆಸಿ ಶ್ರೀಮಠದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಶ್ರೀಮಠದ ಭಕ್ತರಾದ ಅಮರಪ್ಪ ಕಲಬುರ್ಗಿ, ಸಂಗಣ್ಣ ಟೆಂಗಿನಕಾಯಿ, ಮಲ್ಲಿಕಾರ್ಜುನ ರಾಮಶೆಟ್ಟಿ, ಮಹಾಂತೇಶ ಗಾಣಿಗೇರ ಆಕ್ಷೇಪಿಸಿದ್ದಾರೆ.

ಸಿದ್ದರಾಮೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠದ ಆವರಣದೊಳಗೆ ಇದೇ ಸೆ. ೧೦ರಂದು ಜನ ಸಮೂಹವೊಂದು ನುಗ್ಗಿ ಸಭೆ ನಡೆಸಿದೆ. ಹಿಂದೆ ಟೆನೆಂಟ್ ಕಾಯ್ದೆಯಲ್ಲಿ ಮಠದ ಭೂಮಿ ತಮಗೆ ಸಿಕ್ಕಿಲ್ಲವೆಂಬ ಕಾರಣಕ್ಕೆ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಅಲ್ಲಿದ್ದರು. ಅವರು ಮಠದ ಪರಂಪರೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಅದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಮಠದ ಶಾಲೆಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುವ ರೇವಣಸಿದ್ದಯ್ಯ ಎಂಬಾತ ಮಠದಲ್ಲಿ ದುಡ್ಡಿನ ಅವ್ಯವಹಾರ ಮಾಡಿದ್ದಾರೆ. ತನ್ನ ಪತ್ನಿಯ ಮಾಲೀಕತ್ವದ ಪೂಜಾ ಅಂಗಡಿಯಿಂದ ಸಾಮಗ್ರಿಗಳನ್ನು ತಂದು ಮಠದ ಭಕ್ತರ ಮನೆಯಲ್ಲಿ ಪೂಜೆ ಮಾಡಿ, ಹಣ ವಸೂಲಿ ಮಾಡಿದ್ದಾರೆ. ಈ ವಿಚಾರ ಸ್ವಾಮಿಗಳಿಗೂ ಹಾಗೂ ಶಿಷ್ಯ ಸಮೂಹಕ್ಕೆ ಗೊತ್ತಾದ ಕಾರಣ ಮಠಕ್ಕೆ ಬರಬೇಡಿ ಎಂದು ಸೂಚಿಸಲಾಗಿತ್ತು. ಅವರು ಜನರ ಗುಂಪಿನೊಂದಿಗೆ ಮಠಕ್ಕೆ ಏಕಾಏಕಿ ನುಗ್ಗಿ ಸಭೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಕ್ತ ಸಮೂಹ ಕರೆ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ಜನರು ಮಠದಲ್ಲಿ ಬಂದು ಶ್ರೀಗಳ ಮನಸ್ಸಿಗೆ ನೋವುಂಟು ಮಾಡಿದರೆ ನಾವೆಲ್ಲರೂ ಕಾನೂನು ಮೊರೆ ಹೋಗಿ, ಶ್ರೀಗಳ ಹಾಗೂ ಮಠದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

ಸಿದ್ಧರಾಮೇಶ್ವರ ಸಂಸ್ಥಾನ ಹಿರೇಮಠ ಸಾವಿರಾರು ವರ್ಷಗಳ ಇತಿಹಾಸವುಳ್ಳ ಒಂದು ವಂಶಪಾರಂಪರ್ಯ ಗುರುಸ್ಥಳ. ಇದಕ್ಕೆ ಶ್ರೀಗಳೇ ವೈಯಕ್ತಿಕ ಅಧಿಕಾರವುಳ್ಳ ಪೀಠಾಧಿಪತಿಗಳಾಗಿರುತ್ತಾರೆ. ಈ ಮಠಕ್ಕೆ ಪೀಠಾಧಿಪತಿಗಳ ವಂಶಸ್ಥರೆ ಅಧಿಕಾರ ವಹಿಸಿಕೊಳ್ಳುವುದು ಸಂಪ್ರದಾಯ. ಇದು ಟ್ರಸ್ಟ್ ಮಾಡಲು ವಿರಕ್ತಮಠ ಅಥವಾ ಗುಡಿ-ಗುಂಡಾರವಲ್ಲ ಎಂದು ಹೇಳಿದರು.

ಪೀಠಾಧಿಪತಿಗಳು ಪಟ್ಟಾಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ಶ್ರೀಮಠದ ಆಸ್ತಿ ಪರಭಾರೆ ಅಥವಾ ಯಾವುದೇ ಅವ್ಯವಹಾರ ಕುರಿತು ದಾಖಲೆಗಳಿದ್ದರೆ ಭಕ್ತ ಸಮೂಹದ ಮುಂದಿಟ್ಟು ಮಾತನಾಡಬೇಕು. ಅಲ್ಲದೆ ಕೇವಲ ಮೌಖಿಕವಾಗಿ ಪ್ರಚೋದನಕಾರಿ ಮಾತುಗಳಿಂದ ಶ್ರೀಮಠಕ್ಕೆ ಅಪಪ್ರಚಾರ ಮಾಡುವುದು ಹಾಗೂ ತಮ್ಮಷ್ಟಕ್ಕೆ ತಾವೇ ಟ್ರಸ್ಟ್ ರಚಿಸಿಕೊಳ್ಳುವುದು ಕಾನೂನುಬಾಹಿರ ಕೆಲಸವಾಗುತ್ತದೆ ಎಂದರು.

ಭಕ್ತರಾದ ಆನಂದ ಶಿವಪೂಜೆ, ವಿ.ಎಸ್. ಪಾಟೀಲ, ಆರ್.ಎಸ್. ಪಾಟೀಲ, ಬಿ. ಶರಣಪ್ಪ, ವೀರಯ್ಯ ಕಲ್ಲೂರು ಮತ್ತಿತರರು ಇದ್ದರು.