ಸಿ.ಟಿ.ರವಿ ಹರಕಲು ಬಾಯಿ ಸಂಸ್ಕೃತಿ ಇದೆ ಮೊದಲಲ್ಲ

| Published : Dec 21 2024, 01:15 AM IST

ಸಾರಾಂಶ

ಸಿ.ಟಿ.ರವಿ ಅವರ ಹರಕಲು ಬಾಯಿ ಸಂಸ್ಕೃತಿ ಇದೇ ಮೊದಲಲ್ಲ. ಅವರು ಈ ಹಿಂದೆ ಸಿದ್ದರಾಮಯ್ಯ ಸೇರಿದಂತೆ ಯಾರ ಬಗ್ಗೆ ಏನೆಲ್ಲಾ ಪದ ಪ್ರಯೋಗ ಮಾಡಿದ್ದಾರೆ ಎಂಬುವುದು ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಿ.ಟಿ.ರವಿ ಅವರ ಹರಕಲು ಬಾಯಿ ಸಂಸ್ಕೃತಿ ಇದೇ ಮೊದಲಲ್ಲ. ಅವರು ಈ ಹಿಂದೆ ಸಿದ್ದರಾಮಯ್ಯ ಸೇರಿದಂತೆ ಯಾರ ಬಗ್ಗೆ ಏನೆಲ್ಲಾ ಪದ ಪ್ರಯೋಗ ಮಾಡಿದ್ದಾರೆ ಎಂಬುವುದು ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಹೀಗೆ ನಮ್ಮ ನಾಯಕರ ವಿರುದ್ಧ ಬಹಳ ಕೀಳುಮಟ್ಟದ ಪದ ಬಳಕೆ ಮಾಡಿದ್ದಾರೆ. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತದ ಸಂಸ್ಕೃತಿಯೇ? ಬಿಜೆಪಿ ಸಂಸ್ಕೃತಿಯೇ? ಚಿಕ್ಕಮಗಳೂರಿನಲ್ಲಿ ಇಂತಹ ಸಂಸ್ಕೃತಿಯನ್ನು ನಾನು ಈವರೆಗೂ ನೋಡಿಲ್ಲ. ಇಡೀ ಚಿಕ್ಕಮಗಳೂರಿನಲ್ಲಿ ಇವನೊಬ್ಬನೇ ಇಷ್ಟು ಕೀಳುಮಟ್ಟದ ಸಂಸ್ಕೃತಿ ಹೊಂದಿರುವ ವ್ಯಕ್ತಿ ಎಂದು ಕಿಡಿಕಾರಿದರು.ಸದನದಲ್ಲಿ ಅಂಬೇಡ್ಕರ್‌ ಅವರಿಗೆ ಕೇಂದ್ರ ಗೃಹಸಚಿವರು ಅಪಮಾನ ಮಾಡಿದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಈತ ರಾಹುಲ್ ಗಾಂಧಿ ಅವರನ್ನು ಮಾದಕ ವ್ಯಸನಿ ಎಂದು ನಿಂದಿಸಿದ್ದರು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪಕ್ಷದ ನಾಯಕನ ಸಮರ್ಥನೆಗೆ ಮುಂದಾದಾಗ, ಆತ ನಮ್ಮ ಸಚಿವರನ್ನು ಹಲವು ಬಾರಿ ಪ್ರೋಸ್ಟಿ.... ಎಂದು ಕರೆದಿದ್ದಾನೆ. ಬಿಜೆಪಿಯವರು ತಮ್ಮ ನಾಯಕನನ್ನು ಹೇಗೆ ಸಮರ್ಥನೆ ಮಾಡಿಕೊಂಡರೋ ಅದೇ ರೀತಿ ನಮ್ಮ ಸಚಿವರು ನಮ್ಮ ನಾಯಕರನ್ನು ಸಮರ್ಥನೆ ಮಾಡಿಕೊಳ್ಳುವುದು ತಪ್ಪೇ? ಅದಕ್ಕಾಗಿ ಇಂತಹ ಪದ ಬಳಸುವುದೇ ಎಂದು ಪ್ರಶ್ನಿಸಿದರು.ಒಟ್ಟು 12 ಬಾರಿ ಈ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಮಾಧ್ಯಮಗಳು ಈ ಎಲ್ಲಾ ಅಂಶಗಳನ್ನು ಸೇರಿ ಸುದ್ದಿ ಪ್ರಕಟಿಸಬೇಕು. ನಿಮ್ಮ ಬಳಿ ದಾಖಲೆ ಇಲ್ಲವಾದರೆ ಹೇಳಿ ನಾನು ನೀಡುತ್ತೇನೆ ಎಂದ ಅವರು, ಪರಿಷತ್ತಿನಲ್ಲಿ ಗುರುವಾರದಂದು ನನ್ನ ಇಲಾಖೆಗಳಿಗೆ ಸಂಬಂಧಿಸಿದ 12 ಪ್ರಶ್ನೆಗಳಿದ್ದವು. ಅವುಗಳಿಗೆ ಉತ್ತರ ನೀಡಿ ನಾನು ವಿಧಾನಸಭೆಗೆ ಬಂದಾಗ ಈ ಘಟನೆ ನಡೆದಿದೆ ಎಂದರು.ಸಭಾಪತಿಗಳ ನಡೆ ಬೇಸರ ತಂದಿದೆ:

ಸಾಕ್ಷಿಗಳು ಇದ್ದರೆ ಸಭಾಪತಿಗಳು ಕ್ರಮ ಕೈಗೊಳ್ಳಬಹುದಿತ್ತಲ್ಲವೇ ಎಂದು ಮಾಧ್ಯಮದವರು ಕೇಳಿದಾಗ, ಅವರು ಹಿರಿಯ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಈ ವಿಚಾರದಲ್ಲಿ ಅವರ ನಡೆ ಬೇಸರ ತಂದಿದೆ. ಅವರು ಯಾವುದೇ ಪಕ್ಷದವರಾದರೂ ಸಭಾಪತಿ ಸ್ಥಾನದಲ್ಲಿ ಕೂತಾಗ ಎಲ್ಲರ ರಕ್ಷಣೆ ಮಾಡಬೇಕು. ಈ ವಿಚಾರವಾಗಿ ಅವರು ನಿನ್ನೆ (ಗುರುವಾರ) ಚರ್ಚೆಗೆ ಅವಕಾಶ ನೀಡಬೇಕಿತ್ತು. ಅಲ್ಲಿ ಏನಾಗಿದೆ ಎಂದು ಪರಿಶೀಲನೆ ಮಾಡಬೇಕಿತ್ತು. ಒಂದು ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಪ್ಪಿದ್ದರೆ ಅವರದ್ದೆ ತಪ್ಪು ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ಇಬ್ಬರನ್ನು ಕರೆದುಕೊಂಡು ಹೋಗಿ ಹೇಳಿಕೆ ಬರೆಸಿಕೊಳ್ಳುವುದು ಸರಿಯಲ್ಲ ಎಂದರು.ಪೊಲೀಸರು ರಾತ್ರಿ ಪೂರ್ತಿ ಸಿ.ಟಿ.ರವಿಯವರನ್ನು ತಿರುಗಾಡಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, ಪೊಲೀಸರು ಏನು ಮಾಡಿದ್ದಾರೆ ಗೊತ್ತಿಲ್ಲ. ಸುಮ್ಮನೆ ಆರೋಪ ಮಾಡುತ್ತಾರೆ. ಪೊಲೀಸರು ಬೇರೆಯವರಿಗಿಂತ ಹೆಚ್ಚು ಸೌಜನ್ಯ ತೋರಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅವರ ಮನೆಯವರಿಗೆ ಅವಕಾಶ ನೀಡಲಿ. ಅದನ್ನು ಬಿಟ್ಟು ಖಾನಾಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರನ್ನು ಬಿಟ್ಟುಕೊಂಡು ಬಿಜೆಪಿ ಸಭೆ ಮಾಡುವುದು ಎಷ್ಟು ಸರಿ? ಈ ವಿಚಾರದಲ್ಲಿ ಪೊಲೀಸರ ನಡೆ ಸರಿಯಿಲ್ಲ. ನಾವು ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿದ್ದರೂ ಅವರಿಗೆ ಯಾವುದೇ ತೊಂದರೆ ಆಗಲು ಅವಕಾಶ ನೀಡಿಲ್ಲ. ತಮ್ಮ ಶಾಸಕಿಗೆ ಅಪಮಾನ ಮಾಡಿದರೆ ಕ್ಷೇತ್ರದ ಜನ ರೊಚ್ಚಿಗೇಳುವುದು ಸಹಜ ಎಂದರು.