ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವುದು ನಮ್ಮ ಕರ್ತವ್ಯ

| Published : Mar 04 2024, 01:16 AM IST

ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವುದು ನಮ್ಮ ಕರ್ತವ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳನ್ನು ಸುರಕ್ಷಿತವಾಗಿ ಮತ್ತು ಸಂಸ್ಕಾರಯುತವಾಗಿ ಬೆಳೆಸುವುದು ನಮ್ಮ ನಿಮ್ಮೆಲರ ಆದ್ಯ ಕರ್ತವ್ಯವಾಗಿದೆ. ನಮ್ಮಲ್ಲಿ ಬರುವಂತಹ ಮಕ್ಕಳು ವಿಶೇಷದಲ್ಲಿ ವಿಶೇಷವಾಗಿರುತ್ತಾರೆ. ಅವರನ್ನು ತಿದ್ದಿ ಒಳ್ಳೆಯ ನಾಗರಿಕರನ್ನಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿಮ್ಮೆಲ್ಲರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಬಾಲನ್ಯಾಯ ಮಂಡಳಿಯ ಪ್ರಧಾನ ದಂಡಾಧಿಕಾರಿ ಶ್ರೀಕಂಠ ಎನ್. ಎ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಕ್ಕಳನ್ನು ಸುರಕ್ಷಿತವಾಗಿ ಮತ್ತು ಸಂಸ್ಕಾರಯುತವಾಗಿ ಬೆಳೆಸುವುದು ನಮ್ಮ ನಿಮ್ಮೆಲರ ಆದ್ಯ ಕರ್ತವ್ಯವಾಗಿದೆ. ನಮ್ಮಲ್ಲಿ ಬರುವಂತಹ ಮಕ್ಕಳು ವಿಶೇಷದಲ್ಲಿ ವಿಶೇಷವಾಗಿರುತ್ತಾರೆ. ಅವರನ್ನು ತಿದ್ದಿ ಒಳ್ಳೆಯ ನಾಗರಿಕರನ್ನಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿಮ್ಮೆಲ್ಲರ ಪಾತ್ರ ಪ್ರಮುಖವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಬಾಲನ್ಯಾಯ ಮಂಡಳಿಯ ಪ್ರಧಾನ ದಂಡಾಧಿಕಾರಿ ಶ್ರೀಕಂಠ ಎನ್. ಎ ಹೇಳಿದರು.

ನಗರದ ಸರ್ಕಾರಿ ವೀಕ್ಷಣಾಲಯ ಸಭಾಗೃಹದಲ್ಲ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಬಾಲನ್ಯಾಯ ಕಾಯ್ದೆ ಮಕ್ಕಳ ಪಾಲನೆ ಮತ್ತು ರಕ್ಷಣೆ 2015 ತಿದ್ದುಪಡಿ 2021 ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಒಳಗೊಂಡತೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಇಂತಹ ತರಬೇತಿ ಕಾರ್ಯಾಗಾರವು ತುಂಬಾ ಮಹತ್ವವಾಗಿದ್ದು, ಸಂಸ್ಥೆಗಳಲ್ಲಿ ಶಿಸ್ತಿನಿಂದ ಮಕ್ಕಳನ್ನು ಬೆಳೆಸಬೇಕೆಂದರು. ಮಕ್ಕಳ ಹಕ್ಕುಗಳನ್ನು ಮಕ್ಕಳಿಗೆ ಸಿಗುವ ಹಾಗೇ ನಿಮ್ಮೆಲ್ಲರ ಬೆಂಬಲವಿರಬೇಕು. ನಮ್ಮಲ್ಲಿ ಬರುವಂತಹ ಮಕ್ಕಳು ಬೇರೆ ಬೇರೆ ಪ್ರಕರಣಕ್ಕೆ ಒಳಗೊಂಡಿದ್ದು, ಅವರಲ್ಲಿ ತಾರತಮ್ಯ ಮಾಡದೇ, ಹಿಯಾಳಿಸದೇ ಸೂಕ್ಷ್ಮವಾಗಿ ಅವರ ಮನಸ್ಥಿತಿ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಬೇಕು ಎಂದರು.

ಬಾಲನ್ಯಾಯ ಕಾಯ್ದೆಯಲ್ಲಿ ಮೂರು ರೀತಿಯಾದ ಮಕ್ಕಳನ್ನು ಕಾಣುತ್ತೇವೆ. ಮೊದಲನೆಯದಾಗಿ ಪರಿತ್ಯಕ್ತ ಮಗು, ಈ ಮಗು ತಂದೆ, ತಾಯಿಗೆ ಬೇಡವಾದ, ತ್ಯಜಿಸಿದ ಮಗುವಾಗಿರುತ್ತದೆ. ಇಂತಹ ಮಕ್ಕಳನ್ನು ಕಾನೂನಾತ್ಮಕವಾಗಿ ಇಲಾಖೆಯಿಂದ ಅರ್ಹ ದಂಪತಿಗಳಿಗೆ ದತ್ತು ನೀಡಲಾಗುತ್ತದೆ. ಎರಡನೆಯದಾಗಿ ಕಾನೂನಿನೊಡನೆ ಸಂಘರ್ಷಕ್ಕೊಳಗಾದ ಮಗು, ಇಲ್ಲಿ 18 ವರ್ಷದೊಳಗಿನ ಮಗು ಕಾನೂನಿನ ವಿರುದ್ಧವಾಗಿ ತಪ್ಪು ಮಾಡಿದಲ್ಲಿ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗುತ್ತದೆ. ಕೊನೆಯದಾಗಿ ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಗು, ಅನಾಥ, ಏಕಪೋಷಕ, ಬಾಲ್ಯವಿವಾಹಕ್ಕೊಳಗಾದ ಮಗು, ಬಾಲಕಾರ್ಮಿಕ, ಪೋಕ್ಸೋ, ಕುಟುಂಬದಲ್ಲಿ ಶಿಕ್ಷಣಕ್ಕೆ ಬೆಂಬಲವಿಲ್ಲದ ಮಗು, ಭೀಕರ ಕಾಯಿಲೆಗೆ ಒಳಗಾದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಅವರಿಗೆ ಅವಶ್ಯವಿರುವ ಯೋಜನೆ ಸೌಲಭ್ಯ ನೀಡಬೇಕು ಎಂದು ಸೂಚಿಸಿದರು.

ಮಕ್ಕಳ ವಿಶೇಷ ಪೊಲೀಸ್ ಘಟಕದ ನೋಡಲ್ ಅಧಿಕಾರಿ ಹಾಗೂ ಪೊಲೀಸ್ ಉಪ ಆಯುಕ್ತೆ ಪಿ.ವಿ.ಸ್ನೇಹಾ ಮಾತನಾಡಿ, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮಕ್ಕಳ ಸ್ನೇಹಿಯಾಗಿರುತ್ತಾರೆ. ಅಂತಹ ವಾತಾವರಣವನ್ನು ಬೆಳಗಾವಿ ನಗರ ಆಯುಕ್ತಾಲಯದ ವ್ಯಾಪ್ತಿಯಲ್ಲಿ ನಿರ್ಮಸಲಾಗಿದೆ. ಮಕ್ಕಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಸಿ ತುರ್ತಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ನಮ್ಮ ಪ್ರತಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡುವದರೊಂದಿಗೆ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳ ನಿರ್ಮಾಣದಲ್ಲಿ ಕೈಜೋಡಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಪೊಲೀಸ್ ಅಧಿಕಾರಿಗಳು, ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.