ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಭೂಮಿ ಮೇಲೆ ಆರೋಗ್ಯವಂತ ಜೀವನ ನಡೆಸಲು ಬೇಕಾದ ಶುದ್ಧ ಗಾಳಿ, ನೀರು ಹಾಗೂ ಆಹಾರಕ್ಕೆ ಬೇಕಾದ ಉತ್ತಮ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಾಂಶುಪಾಲ ಎಂ.ಮಲ್ಲಿಕಾರ್ಜುನ ಹೇಳಿದರು.ತಾಲೂಕಿನ ವಿಠಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿಕ್ಕೇರಿ ವಲಯದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು ಮಾತನಾಡಿದರು.
ಮಾನವನ ಅತಿ ಆಸೆ ಫಲವಾಗಿ ಗಿಡ ಮರಗಳನ್ನು ಕಡಿದು, ನಗರಗಳನ್ನು ನಿರ್ಮಿಸಿ ಕಾಡನ್ನು ನಾಶ ಮಾಡುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಾಸ ಉಂಟಾಗಿ ಕಾಲ ಕಾಲಕ್ಕೆ ಮಳೆಯಾಗಿ, ಉತ್ತಮ ಬೆಳೆಯಾಗದೆ ರೈತ ಬಾಂಧವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.ಕಾರ್ಖಾನೆಗಳಿಂದ ಹೊರಬರುವ ಹೊಗೆ ಹಾಗೂ ತ್ಯಾಜ್ಯದಿಂದಾಗಿ ನಾವು ಉಸಿರಾಡುವ ಗಾಳಿ ಕುಡಿಯುವ ನೀರು ಹಾಗೂ ತಿನ್ನುವ ಆಹಾರದಲ್ಲಿ ವಿಷದ ಅಂಶವು ಸೇರ್ಪಡೆಯಾಗಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಆದ್ದರಿಂದ ಅನಾಹುತ ಸಂಭವಿಸಿಕೊಳ್ಳುವ ಮುನ್ನ ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ನಮ್ಮ ಪೀಳಿಗೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗಿಡಮರಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಬೇಕು. ಮನೆಗೆ ಎರಡು ಮರ ಊರಿಗೊಂದು ತೋಪು ಎಂಬ ಹಿರಿಯರ ನಾಣ್ಣುಡಿಯಂತೆ ಕಡ್ಡಾಯವಾಗಿ ನಮ್ಮ ಮನೆ ಮುಂದೆ ಕೈತೋಟವನ್ನು ನಿರ್ಮಿಸಿಕೊಳ್ಳುವ ಜೊತೆಗೆ ಗಿಡಮರಗಳನ್ನು ನೆಟ್ಟು ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಗತಿ ಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕುಸುಮಾ ಮಾತನಾಡಿದರು. ಮೇಲ್ವಿಚಾರಕರಾದ ಗುಣಶ್ರೀ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಂಕರ್, ಶಿಕ್ಷಕರಾದ ಯೋಗೇಶ್, ರಾಮಕೃಷ್ಣ, ಸೇವಾ ಪ್ರತಿನಿಧಿಗಳಾದ ಶಶಿಕಲಾ, ಅನಿತಾ, ನೇತ್ರಾವತಿ, ಶ್ವೇತಾ, ಉಮಾ ಭುವನಾ ಮತ್ತಿತರರು ಉಪಸ್ಥಿತರಿದ್ದರು.