ಸಾರಾಂಶ
ತಂತ್ರಜ್ಞಾನ ಬಳಕೆಯಿಂದ ಬಹಳಷ್ಟು ಗುಬ್ಬಿಗಳ ಸಾವಿಗೆ ಮನುಷ್ಯ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಆದರೂ ಮನುಷ್ಯತ್ವವನ್ನು ಹೊಂದಿದ ನಾವು ನಮ್ಮೊಂದಿಗೆ ಎಲ್ಲ ಪಕ್ಷಿಗಳನ್ನು ಪೋಷಿಸುವುದು ನಮ್ಮ ಕರ್ತವ್ಯವಾಗಿದೆ. ಇದರ ಬಗ್ಗೆ ಅರಿವು ಹೊಂದಬೇಕು
ಹೊಸಪೇಟೆ: ತಾಲೂಕಿನ ಕಮಲಾಪುರದ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಪದವಿ ಕಾಲೇಜಿನಲ್ಲಿ ವಿಶ್ವ ಗುಬ್ಬಚ್ಚಿಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಬಸವರಾಜ್ ಎಮ್ಮಿಗನೂರ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ವೀಣಾ ಕೆ. ಹಾಗೂ ಕಾಲೇಜಿನ ಸಿಬ್ಬಂದಿ ಗೌಡರ ವಿಶ್ವನಾಥ್, ಗಂಗಮ್ಮ, ಮುರುಗೇಶ್ ಹಾಗೂ ವಿದ್ಯಾರ್ಥಿಗಳು ಕಾಲೇಜಿನ ಸುತ್ತಮುತ್ತಲಿನ ಗಿಡಗಳಿಗೆ ನೀರಿನ ಅರವಟ್ಟಿಗೆಗಳನ್ನು ಕಟ್ಟಿ ಅವುಗಳಿಗೆ ನೀರು ತುಂಬಿಸಿದರು. ಸುಡುಬಿಸಿಲಿನಲ್ಲಿ ಗುಬ್ಬಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಬಾರದೆಂದು ನೀರಿನ ಅರವಟ್ಟಿಗೆಯನ್ನು ಅಲ್ಲಲ್ಲಿ ತೂಗುಹಾಕಿ ವಿಶ್ವಗುಬ್ಬಚ್ಚಿ ದಿನವನ್ನು ಆಚರಣೆ ಮಾಡಲಾಯಿತು.
ಈ ವೇಳೆ ಪ್ರಾಚಾರ್ಯರು ಮಾತನಾಡಿ, ಗುಬ್ಬಚ್ಚಿಗಳು ಮಾನವನ ಜೊತೆಗೆ ನಿಕಟವಾದ ಸಂಪರ್ಕವನ್ನು ಈ ಹಿಂದೆ ಹೊಂದಿದ್ದವು, ಈಗ ಗುಬ್ಬಚ್ಚಿಗಳು ಅಳವಿನಂಚಿನಲ್ಲಿವೆ. ಮಾನವನ ಆಧುನಿಕ ಜೀವನ ಶೈಲಿಯಿಂದ ತನಗೆ ಸಮಯ ಕೊಡದೆ ಇರುವ ಪರಿಸ್ಥಿತಿ ಇದೆ. ಇನ್ನೂ ಪ್ರಾಣಿ, ಪಕ್ಷಿಗಳ ಕಡೆಗೆ ಗಮನ ಕೊಡುವುದು ಕನಸಿನ ಮಾತಾಗಿದೆ. ತಂತ್ರಜ್ಞಾನ ಬಳಕೆಯಿಂದ ಬಹಳಷ್ಟು ಗುಬ್ಬಿಗಳ ಸಾವಿಗೆ ಮನುಷ್ಯ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಆದರೂ ಮನುಷ್ಯತ್ವವನ್ನು ಹೊಂದಿದ ನಾವು ನಮ್ಮೊಂದಿಗೆ ಎಲ್ಲ ಪಕ್ಷಿಗಳನ್ನು ಪೋಷಿಸುವುದು ನಮ್ಮ ಕರ್ತವ್ಯವಾಗಿದೆ. ಇದರ ಬಗ್ಗೆ ಅರಿವು ಹೊಂದಬೇಕು ಎಂದರು.