ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ

| Published : Jul 15 2024, 01:56 AM IST

ಸಾರಾಂಶ

ತಮ್ಮ ಮನೆ, ಕುಟುಂಬ, ಮಕ್ಕಳು ಎಲ್ಲವನ್ನೂ ಮರೆತು ಯುದ್ಧದಲ್ಲಿ ದೇಶಕ್ಕಾಗಿ ಮಡಿದವರನ್ನು ಸ್ಮರಿಸುವುದು ನಮ್ಮ ಪರಮ ಕರ್ತವ್ಯ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡರು ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುತಮ್ಮ ಮನೆ, ಕುಟುಂಬ, ಮಕ್ಕಳು ಎಲ್ಲವನ್ನೂ ಮರೆತು ಯುದ್ಧದಲ್ಲಿ ದೇಶಕ್ಕಾಗಿ ಮಡಿದವರನ್ನು ಸ್ಮರಿಸುವುದು ನಮ್ಮ ಪರಮ ಕರ್ತವ್ಯ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡರು ಹೇಳಿದರು. ತುಮಕೂರು ಸಿದ್ಧಗಂಗಾ ಮಠದ ಆವರಣದಲ್ಲಿ ಸಿಟಿಜನ್ಸ್‌ ಸೊಸೈಟಿ ಆಫ್‌ ಇಂಡಿಯಾ ಸಂಘಟನೆಯು ಕಾರ್ಗಿಲ್ ಯುದ್ಧದ ರಜತ ಮಹೋತ್ಸವದ ನೆನಪಿನಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಅವರು ಮಾತನಾಡಿದರು.ತಾವು ಈಚೆಗೆ ಕರ್ನಾಟಕ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆಶ್ರಯದಲ್ಲಿ ಲೇಹ್‌ ಮತ್ತು ಲಡಾಖ್‌ಗೆ ಭೇಟಿ ನೀಡಿದಾಗ ಅಲ್ಲಿಯೇ ಹತ್ತಿರದಲ್ಲಿ ಇದ್ದ ಕಾರ್ಗಿಲ್ ವಾರ್ ಮೆಮೋರಿಯಲ್ ಗೆ ಭೇಟಿ ನೀಡಿ ಮಾಹಿತಿ ಪಡೆದುದಾಗಿ ತಿಳಿಸಿದರು.25 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಹೋರಾಟ ಮಾಡಿದರು ಎಂದು ಅವರು ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿಸಿದರು.ಈ ಪ್ರವಾಸದ ಸಮಯದಲ್ಲಿ ಜಲಿಯನ್‌ ವಾಲಾಬಾಗ್‌ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದಾಗ ಅಲ್ಲಿ ಇದ್ದ ಒಂದು ಬರಹವನ್ನು ನೋಡಿ ತಮ್ಮ ಕಣ್ಣಿನಲ್ಲಿ ನೀರು ಬಂತು ಎಂದರು. ಯೋಧರೆಲ್ಲರೂ ತಮ್ಮ ವರ್ತಮಾನದ ಬದುಕನ್ನು ಈ ನಾಡಿನ ಭವಿಷ್ಯಕ್ಕಾಗಿ ತ್ಯಾಗ ಮಾಡುತ್ತಾರೆ. ನಿಮ್ಮ ಮನೆಗೆ ಹೋದ ಮೇಲೆ ನೀವು ನಮ್ಮ ಬಗ್ಗೆ ಹೇಳಿ ಎಂದು ಅದರಲ್ಲಿ ಬರೆದಿತ್ತು ಎಂದು ಅವರು ತಿಳಿಸಿದರು.ಈ ಕಾರ್ಮಕ್ರಮ ಸಿದ್ಧಗಂಗಾ ಶಾಲೆಯ ಆವರಣದಲ್ಲಿ ನಡೆಯುತ್ತಿರುವುದು ಅತ್ಯಂತ ಉಚಿತವಾಗಿದೆ. ಮಕ್ಕಳಿಗೆ ಈ ವಯಸ್ಸಿನಲ್ಲಿಯೇ ದೇಶದ ಗಡಿಯ ರಕ್ಷಣೆಯ ಮಹತ್ವದ ಬಗ್ಗೆ ಮತ್ತು ಸೈನಿಕರು ವಹಿಸುವ ಪಾತ್ರದ ಬಗ್ಗೆ ತಿಳಿವಳಿಕೆ ಬರಬೇಕು. ಗಡಿಯಲ್ಲಿ ಅತ್ಯಂತ ಕಠೋರವಾದ ಕೊರೆಯುವ ಚಳಿಯಲ್ಲಿ ಸೈನಿಕರು ಹೇಗೆ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಾರೆ ಎನ್ನುವುದು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಅರ್ಥವಾಗಬೇಕು ಎಂದು ಅವರು ಒತ್ತಿ ಹೇಳಿದರು. ಸೈನಿಕರನ್ನು ನೋಡಿದಾಗಲೆಲ್ಲ ಅವರಿಗೆ ಒಂದು ಸಲಾಮು ಸಲ್ಲಿಸಬೇಕು ಎಂದು ತಮಗೆ ಅನಿಸುತ್ತದೆ. ಅದಕ್ಕಾಗಿ ಈ ಸಭೆಯಲ್ಲಿ ಭಾಗವಹಿಸಿದ್ದು ತಮ್ಮ ಸುಯೋಗ ಎಂದು ಅವರು ಕೃತಜ್ಞತೆ ಸಲ್ಲಿಸಿದರು. ಸಭೆಯಲ್ಲಿ ಶ್ರೀ ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀಗಳು, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ರವಿ, ಮುನಿಸ್ವಾಮಿ, ರ್ನಲಲ್‌ ಪಿ.ವಿ.ಹರಿನಾಯಕ್‌ ಮಣಿಕಂಠನ್‌ ಕ್ಯಾಪ್ಟನ್‌ ಎಸ್‌.ಸಿ.ಭಂಡಾರಿ ಮತ್ತು ನಿಯೋಗದಲ್ಲಿ ಇದ್ದ ಬಿ.ಪಿ.ಶಿವಕುಮಾರ್‌, ದಿನೇಶ್‌, ವಾಸುದೇವನ್‌, ಶೇಷಾದ್ರಿ, ಕುಮಾರಸ್ವಾಮಿ, ನಾರಾಯಣ್‌ ಮತ್ತು ವೀರೇಂದ್ರ ಮುಂತಾದ ಅನೇಕ ಹಿರಿಯರು ಮತ್ತು ಗಣ್ಯರು ನಿವೃತ್ತ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು.