ಸಂವಿಧಾನ ಉಳಿಸುವುದು ನಮ್ಮೆಲ್ಲರ ಕರ್ತವ್ಯ: ಶಾಸಕ ಗೋವಿಂದಪ್ಪ

| Published : Jan 27 2024, 01:19 AM IST

ಸಾರಾಂಶ

ಹೊಸದುರ್ಗದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

- ಪಟ್ಟಣದ ಪಿಯು ಕಾಲೇಜಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರೆ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಂವಿಧಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದ್ದು, ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸೋಣ ವೆಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ 1950 ಜನವರಿ 26 ರಂದು ರಾಜಪ್ರಭುತ್ವ ಕೊನೆಯಾಗಿ, ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಿತು. ನಮ್ಮನ್ನಾಳುವ ದೊರೆಯನ್ನು ಮತದಾನದ ಮೂಲಕ ನಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡುವಂತಹ ಅವಕಾಶವಿದ್ದು, ಇದು ನಮ್ಮ ಸಂವಿಧಾನದಿಂದ ದೊರೆತಿದೆ ಎಂದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಪ್ರತಿಯೊಬ್ಬ ದೇಶವಾಸಿಗಳಲ್ಲಿ ಜಾಗೃತಿ ಮೂಡಬೇಕು. 75 ನೇ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ರಾಜ್ಯ ಸರ್ಕಾರ 31 ಜಿಲ್ಲೆಯಲ್ಲಿ ಜ.24 ರಿಂದ ಫೆ.23 ರವರೆಗೆ ಸಂವಿಧಾನ ಜಾಗೃತಿ ರಥ ನಡೆಯಲಿದ್ದು, ಹೊಸದುರ್ಗದಲ್ಲಿ ಸಂಚಾರ ನಡೆಯಲಿದೆ. ಹೆಬ್ಬಳ್ಳಿಯಿಂದ ಆರಂಭವಾದ ಜಾಗೃತಿ ರಥ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಬರಲಿದೆ. ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ ಹಕ್ಕನ್ನು ನೀಡಿದೆ. ದೇಶದ ಸಾಮಾನ್ಯ ಪ್ರಜೆಯೂ ದೇಶದ ನಾಯಕನಾಗಬಲ್ಲ ಹಕ್ಕನ್ನು ನೀಡಿರುವುದು ನಮ್ಮ ಸಂವಿಧಾನ. ಇದರ ಆಶಯಗಳನ್ನು ಪಾಲಿಸೋಣವೆಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ತಹಶೀಲ್ದಾರ್ ತಿರುಪತಿ ಪಾಟೀಲ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅನೇಕ ಮಹನೀಯರ ಬೌದ್ಧಿಕ ವಿಚಾರಗಳ ಪ್ರತಿಫಲವಾಗಿ ನಮಗೆ ಸಂವಿಧಾನ ದೊರೆತಿದೆ. ಸಾಮಾನ್ಯ ಪ್ರಜೆ, ದೇಶದ ಉತ್ತಮ ಸ್ಥಾನಕ್ಕೆ ಏರಲು ಸಂವಿಧಾನವೇ ಮುಖ್ಯ ಕಾರಣವಾಗಿದೆ. ದೇಶದ ಐಕ್ಯತೆ ಮತ್ತು ಏಕತೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಭಾರತವೆಂದು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಹೆಸರು ಮಾಡಿದೆ. ಪ್ರತಿಯೊಬ್ಬ ಭಾರತೀಯನು ನಮ್ಮ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿ ಬಹಳ ದೊಡ್ಡದಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯಘಟ್ಟವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ತಾ.ಪಂ.ಇಒ ಸುನಿಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಂಗಾಧರಪ್ಪ ಮತ್ತು ಸಹಾಯಕ ಕೃಷಿ ನಿರ್ದೇಶಕ ಈಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪುರಸಭಾ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.ಫೋಟೋ,26hsd 6: ಹೊಸದುರ್ಗದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು