ಕನ್ನಡಪ್ರಭ ವಾರ್ತೆ, ತುಮಕೂರು ಕನ್ನಡ ಭಾಷೆ ಬಹಳ ಶ್ರೀಮಂತವಾದ ಭಾಷೆ. ಮುಂದಿನ ಪೀಳಿಗೆಗೆ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ನಗರದ ದಿಬ್ಬೂರಿನಲ್ಲಿ ದಿಬ್ಬೂರು ಕನ್ನಡಿಗರ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 13ನೇ ವೈಭವದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಅನೇಕ ಭಾಷೆಗಳಿದ್ದರೂ ಸಹ ನಮ್ಮ ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದರೆ ನಮ್ಮ ಭಾಷೆಗೆ ಎಷ್ಟು ಪ್ರಾಮುಖ್ಯತೆಯ ಇದೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಣೆ ಮಾಡಿದೆ. ಇದಕ್ಕೆ ನಮ್ಮ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಸಾಧನೆಗಳೇ ಕಾರಣ ಎಂದರು. ಮಹಾಭಾರತದಲ್ಲಿ ಕನ್ನಡ ನಾಡನ್ನು ಕರುನಾಡು ಎಂದು ಕರೆದಿದ್ದಾರೆ. ಕರುನಾಡಲ್ಲಿ ಕನ್ನಡವನ್ನು ಉಳಿಸಬೇಕು ಎಂದು ಹೋರಾಟ ಮಾಡುವಂತಹ ಅನಿವಾರ್ಯತೆ ಎದುರಾದಾಗಲೂ ಕನ್ನಡಿಗರು ಬಹಳ ಸಹನಶೀಲತೆ, ಸಂಯಮದಿಂದ ವರ್ತನೆ ಮಾಡಿದರು ಎಂದರು. ಕನ್ನಡವನ್ನು ನಾಶ ಮಾಡುವಂತಹ ಪರಿಸ್ಥಿತಿ ಬರುವಾಗ ಒಂದು ಕಡೆ ಮಹಾರಾಷ್ಟ್ರದ ಮರಾಠಿ, ಮತ್ತೊಂದು ಕಡೆ ಮಲೆಯಾಳಿ ಮಾತಾಡುವ ಕೇರಳದ ಜನ, ಮತ್ತೊಂದು ಕಡೆ ತಮಿಳು ಮಾತನಾಡುವಂತಹ ತಮಿಳರು, ಇನ್ನೊಂದು ಕಡೆ ತೆಲುಗು ಮಾತನಾಡುವ ಆಂಧ್ರದವರು ಈ ನಾಲ್ಕು ಜನರ ಮಧ್ಯೆ ಅತ್ಯಂತ ಶ್ರೇಷ್ಠವಾದ ಭಾಷೆ ಕನ್ನಡ ನಾಶವಾಗಬಾರದು ಎಂದು ಗೋಕಾಕ್ ಚಳವಳಿ ಎಂಬ ಹೋರಾಟವನ್ನು ಕೈಗೆತ್ತಿಕೊಳ್ಳಲಾಯಿತು. ಈ ಹೋರಾಟದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ಅನೇಕ ಸಾಹಿತಿಗಳು ಭಾಗವಹಿಸಿದ್ದರು ಎಂದು ಸ್ಮರಿಸಿದರು.ಪ್ರಸ್ತುತ ಬೆಂಗಳೂರಿನಲ್ಲಿ ಕನ್ನಡ ಉಳಿದಿದ್ದರೆ ಅದು ರಾಜ್‌ಕುಮಾರ್ ರವರ ಅಭಿಮಾನಿಗಳ ಸಂಘದಿಂದ ಎಂದು ಹೆಮ್ಮೆಯಿಂದ ಹೇಳಬಹುದು. ಇದರೊಂದಿಗೆ ಅನೇಕರು ಸಹ ಹೋರಾಟ ಮಾಡಿದ್ದಾರೆ. ಭಾರತೀಯರು ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ ವಿಜ್ಞಾನಿಗಳು ಅದರಲ್ಲೂ ಕನ್ನಡಿಗ ವಿಜ್ಞಾನಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ. ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಬೇಕು. ಹೀಗಾಗಿ ಮುಖ್ಯಮಂತ್ರಿಗಳು ಸಹ ಕಡತಕ್ಕೆ ಸಹಿ ಮಾಡುವಾಗ ಕನ್ನಡದಲ್ಲೇ ಮಾಡಬೇಕು ಎಂದು ಹೇಳಿದ್ದಾರೆ. ನಾವೆಲ್ಲರೂ ಸಹ ಕನ್ನಡದಲ್ಲೇ ಕಡತಕ್ಕೆ ಸಹಿ ಮಾಡುತ್ತೇವೆ ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರರಾದ ಸಾ.ರಾ. ಗೋವಿಂದ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ಆಡಳಿತ ಭಾಷೆಯಾಗಬೇಕು. ಕನ್ನಡದ ಮಕ್ಕಳಿಗೆ ಉದ್ಯೋಗ ಕೊಡಬೇಕು ಎಂದು ನಾವು ಹೋರಾಟ ಮಾಡಿ ಸರ್ಕಾರಗಳನ್ನು ಒತ್ತಾಯಿಸಿದ್ದೇವೆ ಎಂದರು.ಗೋಕಾಕ್ ಚಳವಳಿಯಲ್ಲಿ ಡಾ. ರಾಜ್‌ಕುಮಾರ್ ರವರು ಪಾಲ್ಗೊಂಡು ಕನ್ನಡ ಭಾಳೆ ಉಳಿವಿಗಾಗಿ ಹೋರಾಟ ಮಾಡಿದರು. ಡಾ. ರಾಜ್‌ಕುಮಾರ್ ರವರ ಹೋರಾಟ ನಮಗೆಲ್ಲಾ ಸ್ಫೂರ್ತಿಯಾಯಿತು ಎಂದು ಹೇಳಿದರು.ಚಿತ್ರ ನಟ ವಿನೋದ್ ಪ್ರಭಾಕರ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ತಮ್ಮೆಲ್ಲಾ ವ್ಯವಹಾರಗಳನ್ನು ಕನ್ನಡದಲ್ಲೇ ಮಾಡಿದರೆ ಮಾತೃಭಾಷೆಯನ್ನು ಮತ್ತಷ್ಟು ಉಳಿಸಿ ಬೆಳೆಸಬಹುದಾಗಿದೆ. ಇದಕ್ಕೆ ಇಂದಿನ ಯುವ ಪೀಳಿಗೆ ಶಪಥ ಮಾಡಬೇಕು ಎಂದರು.ಇದೇ ಸಂದರ್ಭದಲ್ಲಿ ದಿಬ್ಬೂರು ಕನ್ನಡಿಗರ ಯುವ ವೇದಿಕೆ ವತಿಯಿಂದ ಮೂವರು ರೈತರಿಗೆ ಟ್ರ್ಯಾಕ್ಟರ್‌ಗಳು ಹಾಗೂ ಕಣ್ಣಿನ ಆರೋಗ್ಯ ತಪಾಸಣೆಗೆ ಒಳಗಾಗಿದ್ದವರಿಗೆ ಉಚಿತವಾಗಿ ಕನ್ನಡಕಗಳನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿತರಿಸಿದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಆಶಾ ಪ್ರಸನ್ನಕುಮಾರ್, ಮಾಗಡಿ ಜಯರಾಮ್, ಕೇಶವಮೂರ್ತಿ, ವೀರಣ್ಣಗುಡಿ ರಮೇಶ್, ಮಂಜುನಾಥ್, ವಿಶ್ವಾಸ್ ಜ್ಯೂಯಲರ್ಸ್ ಮಾಲೀಕರಾದ ವಿಶ್ವಾಸ್, ದಿಬ್ಬೂರು ಕನ್ನಡಿಗರ ಯುವ ವೇದಿಕೆಯ ಮುಖಂಡರುಗಳಾದ ಸತೀಶ್‌ಕುಮಾರ್, ಯೋಗೀಶ್, ಶಿವರಾಜು, ಗಿರೀಶ್, ಹರೀಶ್, ಸತೀಶ್, ಆನಂದ್, ವಿಷ್ಣು, ಹನುಮಂತರಾಜು, ಶಶಿಧರ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಬೆಳೆಸುವ ಹೊಣೆಗಾರಿಕೆ ನಮ್ಮದು
ಕನ್ನಡ ಭಾಷೆ ಬಹಳ ಶ್ರೀಮಂತವಾದ ಭಾಷೆ. ಮುಂದಿನ ಪೀಳಿಗೆಗೆ ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.