ಸಾರಾಂಶ
ಪುನೀತ್ ಹುಟ್ಟುಹಬ್ಬ ಹಿನ್ನೆಲೆ ಕೃಷಿ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣದೇಶದ ಬೆನ್ನೆಲುಬು ರೈತ. ಈ ರೈತನ ಹಿತ ಕಾಪಾಡುವುದೇ ಎಲ್ಲರ ಜವಾಬ್ದಾರಿ ಎಂದು ಶ್ರೀ ಚೌಡೇಶ್ವರಿ ದೇವಾಲಯ ಶಕ್ತಿಪೀಠದ ಹೊಸಕೊಪ್ಪಲು ಬಸವೇಶ್ವರ ಚೈತನ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಅಕ್ಷರ ಮಿತ್ರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಆಯೋಜಿಸಿದ ಡಾ.ಪುನೀತ್ ರಾಜ್‌ಕುಮಾರ್ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕಾಯಕಯೋಗಿ ಕೃಷಿ ಕ್ಷೇತ್ರದ ಅಪ್ರತಿಮ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ರೈತ ಈ ದೇಶದ ಬೆನ್ನೆಲುಬು ರೈತನ ಹಿತ ಕಾಪಾಡಲು ಸರ್ಕಾರ ರೈತರಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ರೈತ ಏನಾದರೂ ದೇಶಕ್ಕೆ ಅನ್ನ ನೀಡದೆ ಹೋದಲ್ಲಿ ಪ್ರತಿಯೊಬ್ಬ ಮನುಷ್ಯ ಕೂಡ ಅನ್ನದ ಸಮಸ್ಯೆ ಎದುರಿಸುತ್ತಾನೆ. ಕಾಲಕಾಲಕ್ಕೆ ಸಮರ್ಪಕವಾಗಿ ಮಳೆಯೂ ಕೂಡ ಅವಶ್ಯಕತೆ ಇದೆ. ಇದನ್ನು ಪ್ರಕೃತಿ ದೇವತೆ ಕೂಡ ಅನುಸರಿಸುತ್ತಿದ್ದಾಳೆ. ಇದನ್ನು ಕೂಡ ಮನುಷ್ಯರು ಮರೆತು ಪ್ರಕೃತಿಯನ್ನು ನಾಶ ಮಾಡುವ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೆನಹಳ್ಳಿ ಮಾತನಾಡಿ, ರೈತರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕೂಡಲೇ ರೈತರ ದಿನಾಚರಣೆಯ ದಿನ ಸರ್ಕಾರಿ ರಜೆ ದಿನ ಎಂದು ಕೂಡಲೇ ಸರ್ಕಾರ ಘೋಷಣೆ ಮಾಡಬೇಕು. ಇದರಿಂದ ರೈತರಿಗೆ ಬಹಳ ಸಂತಸದ ವಿಚಾರವಾಗುತ್ತದೆ. ರೈತ ಇಡೀ ದೇಶಕ್ಕಾಗಿ ಅನ್ನ ಕೊಡುವ ಒಬ್ಬ ಶ್ರಮಜೀವಿಗೆ ಸರ್ಕಾರ ಅನೇಕ ರೀತಿಯ ವಿವಿಧ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರಿಯಾಗಬೇಕು. ಮುಂದೊಂದು ದಿನ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರ ಸಹಾಯಧನವನ್ನು ಸಹ ನೀಡಲು ಮುಂದಾಗಬೇಕು ಎಂದು ತಿಳಿಸಿದರು.ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮ ಬಾಲಕೃಷ್ಣ ಮಾತನಾಡಿ, ರೈತರಿಗೆ ಸರ್ಕಾರದಿಂದ ಬರುವ ಎಲ್ಲಾ ಕೃಷಿ ಸೌಲಭ್ಯ ಸಮರ್ಪಕವಾಗಿ ದೊರಕಬೇಕು. ಕಾಲಕಾಲಕ್ಕೆ ಸರಿಯಾಗಿ ಮಳೆ ಆಗಬೇಕು. ಉತ್ತಮವಾದ ಬಿತ್ತನೆ ಬೀಜ, ರಸಗೊಬ್ಬರ ಇವುಗಳನ್ನು ಸಮರ್ಪಕವಾಗಿ ನೀಡಬೇಕು. ಕಾಯಕವೇ ಯೋಗಿ ಎಂಬ ವೇದದಂತೆ ಕೆಲಸ ಕಾರ್ಯಗಳನ್ನು ನಿಯಮ ಅನುಸಾರವಾಗಿ ರೈತ ಮಾಡುತ್ತ ಬಂದಿದ್ದಾನೆ. ಆದರೆ ರೈತನಿಗೆ ದೊರಕಬೇಕಾದ ಫಸಲು ಸಮರ್ಪಕವಾಗಿ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಚಾಲನೆ ನೀಡಿ ಭಾರತಾಂಬೆ ಮತ್ತು ಡಾ. ಪುನೀತ್ ರಾಜಕುಮಾರ್ ಅವರ ಬೆಳ್ಳಿರಥಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸುಮಾರು ೧೨ ಜನ ಸಾಧಕರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ, ಮಂಗಳೂರು ವಿಭಾಗದ ಅಧ್ಯಕ್ಷ ಪೂರ್ಣಚ್ಚ, ಜಿಲ್ಲಾ ಅಧ್ಯಕ್ಷ ರಘು, ಬಿಜೆಪಿ ಮುಖಂಡ ಅಣತಿ ಆನಂದ್, ಡಾ.ರಾಜ್‌ಕುಮರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪುಟ್ಟಣ್ಣಗೋಕಾಕ್, ಪರಿಸರ ಪ್ರೇಮಿ ಅಶೋಕ್, ಅಕ್ಷರ ಮಿತ್ರ ಸುದ್ದಿ ಸಂಪಾದಕ ಸುನಿಲ್ ಕುಂಬೇನಹಳ್ಳಿ, ರೈತ ಸಂಘದ ಮುಖಂಡರಾದ ಸಿ.ಜಿ.ರವಿ, ರಾಮಚಂದ್ರ, ಹರೀಶ್‌ಮಾಳೇನಹಳ್ಳಿ, ಪ್ರೇಮಮ್ಮ, ಕುಮಾರ್, ಶಿವಣ್ಣ ಹಾಜರಿದ್ದರು.ಚನ್ನರಾಯಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಅಕ್ಷರ ಮಿತ್ರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಆಯೋಜಿಸಿದ ಡಾ.ಪುನೀತ್ ರಾಜ್‌ಕುಮಾರ್ ೪೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೃಷಿ ಸಾಧಕರಿಗೆ ಸನ್ಮಾನಿಸಲಾಯಿತು.