ಕನ್ನಡಪ್ರಭ ವಾರ್ತೆ, ತುಮಕೂರು ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳ ನಿಯಂತ್ರಣ ಮತ್ತು ಪತ್ತೆ ಎಲ್ಲವೂ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿದ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಇತ್ತೀಚೆಗೆ ನಿಯಂತ್ರಣ ಇಲ್ಲದೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಪರಾಧಗಳ ಪಟ್ಟಿಯಲ್ಲಿ ಸೈಬರ್ ಅಪರಾಧ ಮುಂಚೂಣಿಯಲ್ಲಿದೆ. ಇದರ ನಿಯಂತ್ರಕ್ಕೆ ಸಮರ್ಪಕವಾಗಿ ತರಬೇತಿ ಮತ್ತು ಸೌಲಭ್ಯಗಳ ಅಗತ್ಯವಿದೆ. ನೊಂದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಡಬೇಕು. ಇದೊಂದು ಪುಣ್ಯದ ಕೆಲಸ. ಪೊಲೀಸ್ ಇಲಾಖೆಯಲ್ಲಿ ದಿನೇ ದಿನೇ ಕೆಲಸ ಹೆಚ್ಚಾಗುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಆದ್ಯತೆ ಮೇರೆಗೆ ಕೆಲಸ ಮಾಡಬೇಕು. ಅದರಲ್ಲೂ ನೊಂದವರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ಆದ್ಯತೆ ಮೇರೆಗೆ ಪೊಲೀಸರು ಕೆಲಸ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ನಾನು ಸಬ್ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಸಿರಾ ಬಳಿ ನಡೆದ ಶೇಂಗಾ ಬೆಳೆ ರೈತರ ಪ್ರತಿಭಟನೆ ಸಂದರ್ಭದಲ್ಲಿ ಮೇಲಾಧಿಕಾರಿಗಳ ಅಸಮರ್ಪಕ ನಿರ್ವಹಣೆಯಿಂದ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಸಾಯಿಪ್ರಕಾಶ್ ರವರ ಹತ್ಯೆಯಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಬಡವರು, ಅಸಹಾಯಕರು ಅವರ ಕೂಲಿ ಕೆಲಸ ಬಿಟ್ಟು ಪೊಲೀಸ್ ಠಾಣೆಗಳಿಗೆ ಅಲೆಯುವಂತಾಗಬಾರದು. ದಯವಿಟ್ಟು ಪೊಲೀಸರು ಅಸಹಾಯಕರಿಗೆ ಅಶಕ್ತರಿಗೆ, ಮಹಿಳೆಯರಿಗೆ, ವೃದ್ಧರಿಗೆ ಆದ್ಯತೆ ಮೇರೆಗೆ ಕೆಲಸ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಪೊಲೀಸರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕು. ಹಾಗಾಗಿ ಪ್ರತಿನಿತ್ಯವೂ ವ್ಯಾಯಾಮ, ಯೋಗಾಭ್ಯಾಸ, ಆಟೋಟಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., 1965 ರ ಏ.2 ರಂದು ಪೊಲೀಸ್ ಧ್ವಜ ದಿನಾಚರಣೆ ಜಾರಿಗೆ ಬಂತು. ಪೊಲೀಸ್ ಇಲಾಖೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರಿಗೆ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವಂತಹ ಕಾರ್ಯಕ್ರಮ ಇದಾಗಿದೆ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ನಿಧಿ ಸಂಗ್ರಹ ಮಾಡಲಾಗುತ್ತದೆ. ಈ ನಿಧಿ ಸಂಗ್ರಹ ಮಾಡಿದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ನೀಡಲಾಗುವುದು ಎಂದರು.

ಸಮಾರಂಭದಲ್ಲಿ ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್, ನಿವೃತ್ತ ಅಡಿಷನಲ್ ಎಸ್ಪಿ ಅಬ್ದುಲ್ ಖಾದರ್ ಪತ್ನಿ ತಬುಸಮ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸರು ಭಾಗವಹಿಸಿದ್ದರು.