ಸಾರಾಂಶ
ರೋಣ: ಕರ್ತವ್ಯ ನಿಷ್ಠೆ ಇದ್ದಲ್ಲಿ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕಾಯಕ ಅರ್ಥ ಮಾಡಿಕೊಂಡು ಉತ್ತಮ ಕೆಲಸ ಮಾಡುವ ಮೂಲಕ ತಾಲೂಕಿನ ಪ್ರಗತಿ ಹಾಗೂ ಕೀರ್ತಿಗೆ ನಿಮ್ಮದೇ ಆದ ಕೊಡುಗೆ ನೀಡಬೇಕು ಎಂದು ತಾಪಂ ಇಒ ರವಿ ಎ.ಎನ್. ಹೇಳಿದರು.ಅವರು ಗುರುವಾರ ಪಟ್ಟಣದ ಗುರುಭವನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಾಗೂ ನರೇಗಾ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ತಾಪಂ, ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸನ್ಮಾನಿಸಿ ಮಾತನಾಡಿದರು.
ರೋಣ ತಾಲೂಕಿನ ಪ್ರಗತಿ ಉತ್ತಮಗೊಳಿಸಲು ನಿಮ್ಮದೆ ಆದ ಕೊಡುಗೆಯನ್ನು ನೀಡುವ ಮೂಲಕ ತಾಲೂಕನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದಿರಿ. ನಿಮ್ಮೆಲ್ಲರ ಶ್ರಮ ಮತ್ತು ದುಡಿಮೆಯಿಂದ ನಮ್ಮ ತಾಲೂಕು ಮೇಲ್ಮಟ್ಟದಲ್ಲಿದೆ. ಹಾಗಾಗಿ ನಿಮ್ಮನ್ನು ಗೌರವಿಸುವದು ನಮ್ಮ ಕರ್ತವ್ಯ ಎಂದರು. ಇನ್ನೊಂದು ದೃಷ್ಟಿಯಿಂದ ನೋಡಿದಾಗ ಈ ರೀತಿಯ ಸಮಾಗಮದಿಂದ ಸಂಬಂಧಗಳು ಗಟ್ಟಿ ಆಗುವುದರ ಜೊತೆಗೆ ನಂಬಿಕೆ, ಪ್ರೀತಿ, ವಿಶ್ವಾಸ ಹೆಚ್ಚಾಗಿ ಕೆಲಸ ವೃದ್ಧಿಯಾಗುತ್ತದೆ. ನಿಮ್ಮೆಲ್ಲರ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಪ್ರತಿ ವರ್ಷವೂ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಉತ್ತಮ ಕೆಲಸ ಮಾಡಿದವರ ಕಾರ್ಯವನ್ನು ಗುರುತಿಸಿ ಗೌರವಿಸಬೇಕಿದೆ. ಅಂದಾಗ ಇದರಿಂದ ಸಂತಸ, ಹುಮ್ಮಸ್ಸು ಮೂಡಿ ಇನ್ನು ಹತ್ತಾರು ಕೆಲಸವನ್ನು ಮಾಡಲಿಕ್ಕೆ ಪ್ರೇರಣೆ ಬರುತ್ತದೆ ಎಂದರು.ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಒತ್ತಡ ಇರುತ್ತದೆ, ಎಷ್ಟೇ ಒತ್ತಡ ಇದ್ದರು ಸಹ ಅದನ್ನು ಬದಿಗೊತ್ತಿ ಒಗ್ಗಟ್ಟಾಗಿ ಕೆಲಸ ಮಾಡಿ ಜಿಲ್ಲೆಯ ಹಿತ ದೃಷ್ಟಿಯಿಂದ, ತಾಲೂಕಿನ ಹಿತ ದೃಷ್ಟಿಯಿಂದ ಹೊಸ ಆರ್ಥಿಕ ವರ್ಷದಲ್ಲಿ ತಮ್ಮ ಸೇವೆ ಹಾಗೂ ಕಾರ್ಯ ಅವಶ್ಯ ಎಂದರು. ತಹಸೀಲ್ದಾರ್ ನಾಗರಜ ಕೆ. ಮಾತನಾಡಿ, ಇಲಾಖೆಯ ಆಧೀನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ ವರ್ಷ ವಿಶೇಷವಾಗಿ ಕಾರ್ಯ ನಿರ್ವಹಿಸಿದವರನ್ನು ಗರುತಿಸಿ, ಅವರಿಗೆ ಶಬಾಷ್ ಅನ್ನುವುದು, ಅವರನ್ನು ಮತ್ತು ಪ್ರೋತ್ಸಾಹಿಸುವುದು ಉತ್ತಮ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ತಾಪಂ ಅಧಿಕಾರಿಗಳು ಮಾಡಿದ್ದಾರೆ. ಇದು ನಿಜವಾಗಿಯೂ ಒಳ್ಳೆಯ ನಡೆ, ಆಡಳಿತಾತ್ಮಕ ದೃಷ್ಟಿಯಿಂದ ಇದು ಸ್ಫೂರ್ತಿ ನೀಡುತ್ತದೆ ಎಂದರು. ನರೇಗಾ ಯೋಜನೆ ಹಾಗೂ ಪಂಚಾಯತ ರಾಜ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಪಿಡಿಒ, ಟಿಎಇ, ಡಿಇಒ, ಬಿಎಫ್.ಟಿ, ಜೆಕೆಎಂ, ಸಿಪಾಯಿ, ಬಿಲ್ ಕಲೆಕ್ಟರ್, ವಾಟರಮನ್‌ಗಳಿಗೆ ಇಬ್ಬರಂತೆ ಹಾಗೂ ತಾಲೂಕು ಪಂಚಾಯಿತಿಯ ನಾಲ್ಕು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಸ್ತಾವಿಕವಾಗಿ ಸಹಾಯಕ ನಿರ್ದೇಶಕರಾದ ರಿಯಾಜ ಖತೀಬ್ (ಗ್ರಾಮೀಣ ಉದ್ಯೋಗ) ಮಾತನಾಡಿದರು. ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಶಿವಯೋಗಿ ರಿತ್ತಿ ಸ್ವಾಗತಿಸಿದರು. ಪಿಡಿಓ ಶಿವನಗೌಡ ಮೆಣಸಗಿ ಹಾಗೂ ಕಾವೇರಿ ಅಸೂಟಿ ಅನಿಸಿಕೆ ವ್ಯೆಕ್ತಪಡಿಸಿದರು.ಈ ವೇಳೆ ತಾಲೂಕು ಯೋಜನಾಧಿಕಾರಿ ಸಿ.ಎಸ್. ನೀಲಗುಂದ, ತಾಲೂಕು ಪಂಚಾಯಿತಿ ವ್ಯವಸ್ಥಾಪಕರಾದ ದೇವರಾಜ ಸಜ್ಜನಶೆಟ್ಟರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ, ಪಿಡಿಓ ಸಂಘದ ತಾಲೂಕ ಅಧ್ಯಕ್ಷರಾದ ಲೋಹಿತ ಪೂಜಾರ ಸೇರಿದಂತೆ ಪಿಡಿಒಗಳು, ತಾಂತ್ರಿಕ ಸಹಾಯಕರು, ಡಿಇಒಗಳು, ಬಿಎಫ್.ಟಿ, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು. ಮೇಘರಾಜ ಸಿಂಗ್ರಿ ನಿರೂಪಿಸಿ, ವಂದಿಸಿದರು.