ಹೆಸರಲ್ಲೇ ಲಕ್ಷ್ಮಣ ಇರುವಾಗ ರಾಮ ಮಂದಿರಕ್ಕೆ ಹೋಗದಿರಲು ಸಾಧ್ಯವೆ: ಸವದಿ

| Published : Jan 18 2024, 02:01 AM IST

ಹೆಸರಲ್ಲೇ ಲಕ್ಷ್ಮಣ ಇರುವಾಗ ರಾಮ ಮಂದಿರಕ್ಕೆ ಹೋಗದಿರಲು ಸಾಧ್ಯವೆ: ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ನಾನು ರಾಮನ ಪರಮ ಭಕ್ತ, ಅದಕ್ಕೂ ಮಿಗಿಲಾಗಿ ನನ್ನ ಹೆಸರಲ್ಲೇ ಲಕ್ಷ್ಮಣ ಅಂತಿರೋವಾಗ ರಾಮನಿದ್ದಲ್ಲಿಗೆ ಹೋಗದೆ ಇರಲಾಗುತ್ತದೆಯೆ? ರಾಮನ ಭಕ್ತ ನಾನು, ಅವನ ಸಹೋದರನ ಹೆಸರಿದೆ ನನಗೆ, ನಾನು ಈಗಲ್ಲದಿದ್ದರೂ ಮುಂದೆ ಒಂದು ದಿನ ರಾಮ ಮಂದಿರಕ್ಕೆ ಹೋಗಿ ಬರುತ್ತೇನೆ: ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ

ಕನ್ನಡಪ್ರಭ ವಾರ್ತೆ ಕಲಬುರಗಿ

ನಾನು ರಾಮನ ಪರಮ ಭಕ್ತ, ಅದಕ್ಕೂ ಮಿಗಿಲಾಗಿ ನನ್ನ ಹೆಸರಲ್ಲೇ ಲಕ್ಷ್ಮಣ ಅಂತಿರೋವಾಗ ರಾಮನಿದ್ದಲ್ಲಿಗೆ ಹೋಗದೆ ಇರಲಾಗುತ್ತದೆಯೆ? ರಾಮನ ಭಕ್ತ ನಾನು, ಅವನ ಸಹೋದರನ ಹೆಸರಿದೆ ನನಗೆ, ನಾನು ಈಗಲ್ಲದಿದ್ದರೂ ಮುಂದೆ ಒಂದು ದಿನ ರಾಮ ಮಂದಿರಕ್ಕೆ ಹೋಗಿ ಬರುತ್ತೇನೆಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಖಾಸಗಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸಿದ್ದ ಅವರು, ತಮ್ಮನ್ನು ಭೇಟಿ ನಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನ ವಿಚಾರದಲ್ಲಿ ಹೆಚ್ಚಿನ ಚರ್ಚೆ ಅನಗತ್ಯ. ತಾವಂತೂ ಮಂದಿರಕ್ಕೆ ಒಂದು ದಿನ ಭೇಟಿ ನೀಡಿ ಬರೋದಾಗಿ ಸ್ಪಷ್ಟಪಡಿಸಿದ್ದಾರೆ.

ರಾಮ ಮಂದಿರಕ್ಕೆ ಭೇಟಿ ಕೊಡೋ ವಿಚಾರದಲ್ಲಿಯೇ ಸುದ್ದಿಗಾರರು ಪದೇಪದೇ ಪ್ರಶ್ನೆ ಕೇಳಿದಾಗ ರಾಮ ನನ್ನ ಹೃದಯದಲ್ಲಿದ್ದಾನೆಂದು ಖಡಕ್ಕಾಗಿ ಹೇಳಿದ ಲಕ್ಷ್ಮಣ ಸವದಿ, ರಾಮನಿಂದ ಲಕ್ಷ್ಮಣ ಎಂದಿಗೂ ದೂರವಾಗೋದಿಲ್ಲ, ರಾಮನ ಭಕ್ತಿ ದೂರ-ಸಮೀಪ ಅಂತೇನಿರೋದಿಲ್ಲ, ಹೃದಯದಲ್ಲೇ ರಾಮನಿದ್ದಾನೆಂದು ಪುನರುಚ್ಚರಿಸಿದರು.

ಹೆಚ್ಚಿನ ಸ್ಥಾನ ಲೋಕಸಭೆಯಲ್ಲಿ ಗೆಲ್ಲಿಸಿಕೊಡಿ, ಸಿದ್ದರಾಮಯ್ಯನವರೇ ಮುಂದಿನ 5 ವರ್ಷ ಸಿಎಂ ಆಗಲಿದ್ದಾರೆಂದು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸವದಿಯವರು, ಯತೀಂದ್ರ ಹೇಳಿಕೆ ವೈಯಕ್ತಿಕ, ಇಂತಹದ್ದನ್ನೆಲ್ಲ ನೋಡಿಕೊಳ್ಳಲು ಹೈಕಮಾಂಡ್‌ ಇದೆ ಎಂದರು.

ಯಾರು ಏನಾಗಬೇಕು, ಯಾರು ಎಷ್ಟು ಅವಧಿಗೆ ಸಿಎಂ ಆಗಿರಬೇಕು ಎಂಬಿತ್ಯಾದಿ ವಿಚಾರಗಳಿವೆಯಲ್ಲ, ಇದೆಲ್ಲ ವಿಚಾರ ಹೈಕಮಾಂಡ್‌ ನೋಡುತ್ತದೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು. ಹೈಕಮಾಂಡ್‌ ಮನಸ್ಸು ಮಾಡಿದರೆ ಏನೆಲ್ಲಾ ಆಗಬಹುದು, ಇಲ್ಲಾಂದ್ರೆ ಇಲ್ಲ. ಹೈಕಮಾಂಡ್‌ ನಿರ್ಣಯ ಮಾಡಿದ್ರೆ, ಈಗಿನ 5 ವರ್ಷ, ಮುಂದೆ ಸರಕಾರ ಬಂದು ಮತ್ತೆ ಇನ್ನೂ 5 ವರ್ಷ ಸಿಎಂ ಆಗಬಹುದು. ಇದೆಲ್ಲ ಸಂಗತಿ ಹೈಕಮಾಂಡ್‌ ನಿರಣಯಕ್ಕೆಬಿಟ್ಟದ್ದೆಂದರು.

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾದ ಪಂಚ ಗ್ಯಾರಂಟಿಗಳಿಗೆ ಜನ ಸಂತೃಪ್ತರಾಗಿದ್ದಾರೆ. ಲೋಕಸಭೆಯಲ್ಲಿ ಈ ಬಾರಿ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿರುವ ಎಲ್ಲಾ ಸ್ಥಾನ ನಾವೇ (ಕಾಂಗ್ರೆಸ್‌) ಗೆಲ್ಲುತ್ತೇವೆಂದರಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್‌ ಲೋಕಸಭೆಯಲ್ಲಿ 20ರಷ್ಟು ಸ್ಥಾನ ಗೆಲ್ಲುವುದು ನಿಶ್ಚಿತವೆಂದೂ ಭವಿಷ್ಯ ನುಡಿದರು.

ಸಿಎಂ ಅಧಿಕಾರ ಅವಧಿ ಬಗ್ಗೆ ಮಾಧ್ಯಮಗಳೇ ಅನಾವಶ್ಯಕವಾಗಿ ಸೃಷ್ಟಿ ಮಾಡುತ್ತಿದ್ದೀರಿ ಎಂದು ಮಾಧ್ಯಮಗಳತ್ತ ಬೆರಳು ತೋರಿಸಿದ ಸವದಿಯವರು ಪಕ್ಷದ ಲೋಕ ಸಮರದಲ್ಲಿ ಹೆಚ್ಚಿನ ಸ್ಥಾನ ಗೆಲ್ಲೋದೇ ನಮ್ಮ ಗುರಿ ಎಂದರು.

ಮೂವರು ಡಿಸಿಎಂ ಬಗ್ಗೆ ಚರ್ಚೆ ಸಾಗಿದೆ, ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದಲ್ಲವೆ? ಎಂಬ ಪ್ರಶ್ನೆಗೂ ಖಡಕ್ಕಾಗಿ ಉತ್ತರಿಸಿದ ಸವದಿ ಈ ವಿಚಾರದಲ್ಲಿ ನಿಮಗೇನು ಗೊತ್ತು ಎಂದು ಪಾಟೀಸವಾಲು ಹಾಕಿದರು. ಡಿಸಿಎಂ ಚರ್ಚೆ ಪಕ್ಷದ ಮೇಲೆ ಪರಿಣಾಮ ಬಿರುತ್ತೋ, ದುಷ್ಪರಿಣಾಮ ಬಿರುತ್ತೊ ನೋಡೊಣ. ಅದು ಕೂಡಾ ಅವರವರ ವೈಯಕ್ತಿಕ ಹೇಳಿಕೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ 28ಕ್ಕೆ 28 ಸ್ಥಾನ ಗೆಲ್ತೆವೆ ಎನ್ನೋ ವಿಜಯೇಂದ್ರ ಹೇಳಿಕೆಗೆ ತೀರುಗೇಟು ನೀಡಿದ ಸವದಿ, ಬಿಜೆಪಿಯವರು ಪಕ್ಕದ ರಾಜ್ಯದ 2 ಸೀಟು ಸೇರಿಸಿಕೊಂಡು ಹೇಳ್ತಿದ್ದಾರೆಂದು ಲೇವಡಿ ಮಾಡಿದರು.

ನರೇಂದ್ರ ಮೋದಿಯವರ ರಾಜ್ಯದ ಭೇಟಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸವದಿ, ಪ್ರಧಾನಿ ಮೋದಿ ರಾಜ್ಯಕ್ಕೆ ಚುನಾವಣೆ ಇದ್ದಾಗ ಮತ್ರ ಬರುತ್ತಾರೆ. ಜನ ಬರಗಾಲ, ಅತೀವೃಷ್ಟಿ ಎಂದು ನರಳುವಾಗ ಬರೋದಿಲ್ಲ, ಚುನಾವಣೆ ಬಂದಾಗ ಬರಲೇಬೆಕಲ್ಲಾ, ಅದಕ್ಕೆ ಬರುತ್ತಿದ್ದಾರೆಂದು ಬಿಜೆಪಿಗೆ, ಪ್ರಧಾನಿ ಮೋದಿಯವರ ರಾಜ್ಯ ಭೇಟಿ ಬಗ್ಗೆ ಮಾತಲ್ಲೇ ಕುಟುಕಿದರು.