ಗದಗ: ದ್ವೇಷ, ಸಂಘರ್ಷ, ಯುದ್ಧದಿಂದ ಏನನ್ನೂ ಸಾಧಿಸಲಾಗದು. ಪರಸ್ಪರ ಮಾತುಕತೆ, ಸೌಹಾರ್ದ ಭೇಟಿ, ಸಾಮರಸ್ಯದ ಹೋಗಿಬರುವಿಕೆಯಿಂದ ನಾವಿಂದು ಮನ, ಮನೆ, ದೇಶವನ್ನು ಕಟ್ಟಲು ಸಾಧ್ಯವಿದೆ. ಅಂತಹ ಸದ್ಭಾವನೆಯ ಚಿಂತನೆಗೆ ನಾವಿಂದು ಅಣಿಗೊಳ್ಳುವುದು ಅನಿವಾರ್ಯವಾಗಿದೆ ಎಂದು ಬಳ್ಳಾರಿಯ ಸಹಪ್ರಾಂತ ಕಾರ್ಯವಾಹ ವಕ್ತಾರ ಟಿ. ಪ್ರಸನ್ನ ತಿಳಿಸಿದರು.ನಗರದ ಸೇವಾಚೇತನ ಸಭಾಂಗಣದಲ್ಲಿ ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಡೆದ ಡಾ. ಬಾಬಾಸಾಹೇಬ ಅಂಬೇಡ್ಕರ್, ವಿಶ್ವಗುರು ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಸಮಾಜದಲ್ಲಿನ ಮೇಲು, ಕೀಳು, ಬಡತನ, ಸಿರಿತನ, ಅಕ್ಷರಸ್ಥ, ಅನಕ್ಷರಸ್ಥ ಎಂಬುದು ಮುಖ್ಯವಲ್ಲ. ವೈಚಾರಿಕ ಚಿಂತನ ಮೂಡಿಸುವ ಶಿಕ್ಷಣ, ಮಾನವೀಯ ಗುಣಗಳನ್ನು ಗಟ್ಟಿಗೊಳಿಸುವ ಸಂಬಂಧಗಳು, ನಾವೆಲ್ಲರೂ ಒಂದು, ನಾವೆಲ್ಲರೂ ಸಮಾನರು ಎಂಬ ಭಾವ ನಿರ್ಮಾಣಗೊಂಡು ಪರಸ್ಪರ ಕೈಜೋಡಿಸಿದಾಗ ಭಾರತ ಇನ್ನಷ್ಟು ಸಮೃದ್ಧ ಬಲಿಷ್ಠ ದೇಶವಾಗಿ ಹೊರಹೊಮ್ಮಲು ಸಾಧ್ಯ ಎಂದರು.12ನೇ ಶತಮಾನದಲ್ಲಿ ಅನುಭವ ಮಂಟದ ಮೂಲಕ ಸಮಾನತೆ ಧ್ವನಿಸಿ, ವಿಶ್ವಬಂಧುತ್ವ ಸಂದೇಶ ಸಾರಿದ ಬಸವಣ್ಣ ಇಂದಿಗೂ ಪ್ರಸ್ತುತ. ಅಸ್ಪೃಶ್ಯತೆಯಿಂದಾಗಿ ತುಳಿತಕ್ಕೆ ಒಳಗಾದವರನ್ನು ಸ್ವಾಭಿಮಾನದಿಂದ ಎದ್ದು ನಿಲ್ಲುವಂತೆ ಮಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಶಿಕ್ಷಣ ಹಾಗೂ ಸಂಸ್ಕಾರದ ಮೂಲಕ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ, ಸಮಾನತೆ ತಂದ ಮಹಾನ್ ದಾರ್ಶನಿಕರಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತರಾಗಿದ್ದರು ಎಂದರು.ಅಧ್ಯಕ್ಷತೆ ವಹಿಸಿದ್ದ ನೀರಾವರಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಜಿ. ಸಂತೋಜಿ ಮಾತನಾಡಿ, ಹಿಂದೂಗಳೆಲ್ಲರೂ ಒಂದಾಗುವುದು ಎಂದಿಗಿಂತ ಇಂದು ಅವಶ್ಯವಿದೆ. ಜಾತಿ ಧರ್ಮ, ಬಡವ ಶ್ರೀಮಂತ ಎಂಬುದನ್ನು ಮರೆದು ದೇಶದ ಐಕ್ಯತೆಗೆ ಬದ್ಧರಾಗಿರಬೇಕು. ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯ ಸದುಪಯೋಗ ಆಗಬೇಕು. ಗುರು- ವಿರಕ್ತರು ಸದ್ಭಕ್ತರನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಕಾರ್ಯವನ್ನು ಮಾಡಬೇಕಿದೆ ಎಂದರು.
ಈ ವೇಳೆ ಹಿರಿಯ ನ್ಯಾಯವಾದಿ ಸುಧೀರಸಿಂಹ ಘೋರ್ಪಡೆ, ಶ್ರೀಪತಿ ಉಡುಪಿ, ಡಾ. ಉಮೇಶ ಹಾದಿ, ಬಸವರಾಜ ನಾಗಲಾಪೂರ, ಸಂತೋಷ ಅಕ್ಕಿ, ನಾಗವೇಣಿ ಕಟ್ಟಿಮನಿ, ರಮೇಶ ಸಜ್ಜಗಾರ, ನರಸಿಂಹ ಕಾಮಾರ್ತಿ, ಚೇತನ ಮೇರವಾಡೆ, ಸಿ.ಬಿ. ಸೊನ್ನದ, ಮಲ್ಲು ನಾಗಲಾಪೂರ ಸೇರಿದಂತೆ ಮುಂತಾದವರಿದ್ದರು.ರವಿಕಾಂತ ಅಂಗಡಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಸಾಮಾಜಿಕ ಸಾಮರಸ್ಯ ವೇದಿಕೆಯ ಸಂಯೋಜಕ ಹನುಮಂತ ಎನ್. ಕಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಾರುತಿ ಕಟ್ಟಿಮನಿ ನಿರೂಪಿಸಿದರು. ಡಾ. ಪ್ರಕಾಶ ಹೊಸಮನಿ ವಂದಿಸಿದರು.ಸಾಮರಸ್ಯದಿಂದ ದೇಶ ಕಟ್ಟಲು ಸಾಧ್ಯ: ಟಿ. ಪ್ರಸನ್ನ
ಸಮಾಜದಲ್ಲಿನ ಮೇಲು, ಕೀಳು, ಬಡತನ, ಸಿರಿತನ, ಅಕ್ಷರಸ್ಥ, ಅನಕ್ಷರಸ್ಥ ಎಂಬುದು ಮುಖ್ಯವಲ್ಲ. ವೈಚಾರಿಕ ಚಿಂತನ ಮೂಡಿಸುವ ಶಿಕ್ಷಣ, ಮಾನವೀಯ ಗುಣಗಳನ್ನು ಗಟ್ಟಿಗೊಳಿಸುವ ಸಂಬಂಧಗಳು, ನಾವೆಲ್ಲರೂ ಒಂದು, ನಾವೆಲ್ಲರೂ ಸಮಾನರು ಎಂಬ ಭಾವ ನಿರ್ಮಾಣಗೊಂಡು ಪರಸ್ಪರ ಕೈಜೋಡಿಸಿದಾಗ ಭಾರತ ಇನ್ನಷ್ಟು ಸಮೃದ್ಧ ಬಲಿಷ್ಠ ದೇಶವಾಗಿ ಹೊರಹೊಮ್ಮಲು ಸಾಧ್ಯ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.