ಸಾರಾಂಶ
- ಕಂಕನಹಳ್ಳಿ ಶ್ರೀ ಕಲ್ಲೇಶ್ವರ ದೇಗುಲ ಕಳಸಾರೋಹಣ ಕಾರ್ಯಕ್ರಮದಲ್ಲಿ ಹಿರೇಕಲ್ಮಠ ಶ್ರೀ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಹಣ ಇದ್ದವರನ್ನು ಹಣವಂತನೆಂದು, ಗುಣವಿದ್ದವರನ್ನು ಗುಣವಂತನೆಂದು ಕರೆದರೆ ಲಿಂಗ ಇದ್ದವರಿಗೆ ಲಿಂಗವಂತ, ಲಿಂಗಾಯತನೆಂದು ಕರೆಯುತ್ತಾರೆ. ಪ್ರತಿನಿತ್ಯವು ಇಷ್ಟಲಿಂಗ ಪೂಜೆ ಮಾಡಿದರೆ ಸಾತ್ವಿಕ ಶಕ್ತಿಯನ್ನು ಪಡೆಯಬಹುದೆಂದು ಹೊನ್ನಾಳಿ ಹಿರೇಕಲ್ಮಠದ ಡಾ. ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.ತಾಲೂಕಿನ ಕಂಕನಹಳ್ಳಿ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಗೋಪುರ ಕಳಸಾರೋಹಣ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತರಲ್ಲಿ ಇತ್ತೀಚೆಗೆ ಲಿಂಗಧಾರಣೆ ಭಕ್ತಿ ವಿರಳವಾಗುತ್ತಿದೆ. ಲಿಂಗಪೂಜೆ ಬಗ್ಗೆ ಯುವಸಮೂಹ ಉದಾಸೀನತೆ ತೋರುತ್ತಿದೆ. ಈ ಪ್ರವೃತ್ತಿ ಸಮಾಜಕ್ಕೆ ಪಿಡುಗಾಗಿದೆ ಎಂದು ಆಂತಕ ವ್ಯಕ್ತಪಡಿಸಿದರು.
ಇಷ್ಟಲಿಂಗ ಪೂಜೆಯೊಂದಿಗೆ ಹಣೆ ತುಂಬಾ ವಿಭೂತಿ ಹಚ್ಚುವುದರಿಂದ ಅವರನ್ನು ನೋಡುವ ದೃಷ್ಠಿಕೋನವೇ ಬೇರೆ ಆಗಿರುತ್ತದೆ. ವಿಭೂತಿ, ಇಷ್ಟಲಿಂಗ ಧರಿಸಿದರೆ ಸಮಾಜದಲ್ಲಿ ಸಜ್ಜನರು ಗೌರವ ನೀಡುತ್ತಾರೆ. ಧರ್ಮದ ಹಾದಿಯಿಂದ ವಿಮುಖರಾಗಬಾರದು. ಇಂದು ಧರ್ಮ ಹಾಗೂ ಧರ್ಮಾಚರಣೆ ಆಗತ್ಯವಿದೆ. ವೀರಶೈವ ಧರ್ಮದ ಆಚರಣೆಗಳು ವೈಜ್ಞಾನಿಕವಾಗಿಯೂ ಪ್ರಸ್ತುತವಾಗಿದೆ. ವಿಭೂತಿ ಧಾರಣೆ, ಭಾವಶುದ್ಧಿಯಿಂದ ಭಕ್ತಿಯಿಂದ ಪ್ರತಿನಿತ್ಯ ಮನೆಯಲ್ಲಿ ಲಿಂಗ ಪೂಜೆ, ಮಹಾಮಂತ್ರ ಪಠಣದಿಂದ ಜೀವನದಲ್ಲಿ ಆರೋಗ್ಯ, ಉತ್ಸಾಹ, ಸ್ಫೂರ್ತಿ, ಆಸಕ್ತಿಯನ್ನು ಹೊಂದಬಹುದಾಗಿದೆ ಎಂದು ಶ್ರೀಗಳು ಹೇಳಿದರು.ರಾಂಪುರ ಬೃಹನ್ಮಠದ ಶ್ರೀ ಶಿವಕುಮಾರ ಹಾಲಸ್ವಾಮೀಜಿ ಮಾತನಾಡಿ, ಹೊಟ್ಟೆಯ ಹಸಿವನ್ನು ನೀಗಿಸಲು ಪ್ರಸಾದವು ಮುಖ್ಯ. ಹಾಗೆಯೇ ಆಧ್ಯಾತ್ಮಿಕ ಹಸಿವನ್ನು ನೀಗಿಸಲು ಸಾಧು ಸಂತರ, ಧಾರ್ಮಿಕ ಪೂಜಾ ಕೈಂಕರ್ಯಗಳು, ಪುರಾಣ ಪ್ರವಚನಗಳು ಮುಖ್ಯ. ಇಷ್ಟಲಿಂಗ ಧಾರಣೆ ಮಾಡಿ, ಪ್ರತಿನಿತ್ಯ ಸ್ನಾನ ಮಾಡಿ, ವಿಭೂತಿ ಧರಿಸಿ ಭಕ್ತಿಯಿಂದ ಲಿಂಗಪೂಜೆ ಮಾಡಿದರೆ ಆ ಮನೆ ಮಹಾಮನೆ ಆಗುತ್ತದೆ. ಆದ್ದರಿಂದ ನಮ್ಮ ಹಿರಿಯರು ಕೈಯಲ್ಲಿ ಇಷ್ಟಲಿಂಗ ಕೊಟ್ಟಿದ್ದಾರೆ ಎಂದರು.
ವೇದಿಕೆಯಲ್ಲಿ ಹೊಟ್ಯಾಪುರ ಹಿರೇಮಠದ ವೇ.ಓಂಕಾರಸ್ವಾಮಿ ಮರಿದೇವರು, ಶಾಸಕ ಡಿ.ಜಿ. ಶಾಂತನಗೌಡ, ಎಂ.ಪಿ. ಬಸವರಾಜು, ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕೋಡಿಕೊಪ್ಪದ ಶಿವಣ್ಣ ಇದ್ದರು. ಶ್ರೀ ಕಲ್ಲೇಶ್ವರ ದೇಗುಲ ಸಮಿತಿ ಅಧ್ಯಕ್ಷ ಕೆ.ಜಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ವಿಶ್ವನಾಥ, ಎ.ಜಿ. ಷಣ್ಮುಖಪ್ಪ, ಕೆ.ಜಿ. ವೇದಾವತಿ, ಚೈತನ್ಯ ಪಟೇಲ್, ಸಹನ, ಶುಭಶ್ರೀ, ನಿವೃತ್ತ ಉಪನ್ಯಾಸಕ ಗಂಜೀನಹಳ್ಳಿ ಬಸವರಾಜಪ್ಪ, ಉಮೇಶ್ ಅರಬಗಟ್ಟೆ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಗಿನ ಜಾವ ಹೊನ್ನಾಳಿ ಎಂ.ಎಸ್. ಶಾಸ್ತ್ರಿ ಮತ್ತು ಸಂಗಡಿಗರ ಪೌರೋಹಿತ್ಯದಲ್ಲಿ ಗ್ರಾಮದ ಸುಮಂಗಲಿಯರ ಗಂಗಾಪೂಜೆ, ಶ್ರೀ ಗಣೇಶ, ಪುಣ್ಯಾಹ, ನಾಂದಿ, ಪಂಚಕಳಸ, ರುದ್ರಕಳಸ, ಮಹಾಲಕ್ಷ್ಮೀ, ಉಮಾಮಹೇಶ್ವರ, ಅಷ್ಟಾದಿಕ್ಪಾಲಕ, ನವಗ್ರಹ ಶಾಂತಿ, ಮೃತ್ಯುಂಜಯ ಶಾಂತಿ, ವಾಸ್ತುಶಾಂತಿ, ಹೋಮ ಪೂಜೆಗಳು ನೆರವೇರಿದವು.- - -
-ಫೋಟೋ:ಕಾರ್ಯಕ್ರಮವನ್ನು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.