ಹಾನಗಲ್ಲ: ನಕಾರಾತ್ಮಕ ಆಲೋಚನೆಗಳನ್ನು ಕೈಬಿಟ್ಟು ಕಠಿಣ ಪರಿಶ್ರಮದಿಂದ ಜ್ಞಾನ ಸಂಪಾದಿಸಿದರೆ ಬದುಕಿನಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ತಹಸೀಲ್ದಾರ್ ಎಸ್. ರೇಣುಕಾ ಕರೆ ನೀಡಿದರು.ಗುರುವಾರ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸವಾಲುಗಳನ್ನು ಎದುರಿಸಿ ಜ್ಞಾನ ಸಂಪತ್ತನ್ನು ಸಂಪಾದಿಸಿ ಸರಿಯಾದ ಗುರಿ ಧ್ಯೇಯದೊಂದಿಗೆ ಪರಿಶ್ರಮಪಟ್ಟರೆ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಾವು ಉತ್ತಮ ವಾತಾವರಣ ಕಲ್ಪಿಸಿಕೊಂಡು ಪರಿಣಾಮಕಾರಿಯಾದ ಅಧ್ಯಯನಕ್ಕೆ ಮುಂದಾಗಬೇಕು. ಕಾಲಹರಣವಿಲ್ಲದೇ ಸರಿಯಾದ ಗುರಿಯಿಟ್ಟುಕೊಂಡು, ಹಾರ್ಡ್ ವರ್ಕ್ ಮಾಡಿದರೆ ಎಲ್ಲವೂ ಸಾಧ್ಯ. ಸಾಮಾನ್ಯ ಜ್ಞಾನಕ್ಕಾಗಿ ಪತ್ರಿಕೆಗಳ ಓದು ಅತ್ಯವಶ್ಯಕ. ಸರ್ಕಾರಿ ಉದ್ಯೋಗ ಎಂದು ಕಾಯುವುದು ಬೇಡ. ಖಾಸಗಿ ಉದ್ಯಮಗಳಲ್ಲಿಯೂ ಅತ್ಯುತ್ತಮ ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಾದವರಿಗೆ ನಕಾರಾತ್ಮಕ ಚಿಂತನೆಗಳು ಬೇಡ. ಸಕಾರಾತ್ಮಕವಾಗಿ ಆಲೋಚಿಸಿ ಮುನ್ನಡೆಯಿರಿ ಎಂದರು.ಮುಖ್ಯ ಅತಿಥಿಯಾಗಿದ್ದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಬದುಕು ಕಟ್ಟಿಕೊಳ್ಳುವುದೇ ಹೊರತು ಕಾಲಹರಣದ ಮೂಲಕ ಸಲ್ಲದ ವಿಚಾರಗಳಿಗೆ ಬಲಿಯಾಗುವುದಲ್ಲ. ತಂದೆ-ತಾಯಿಯರ ಉತ್ತಮ ಮಾರ್ಗದರ್ಶನ, ಗುರುಗಳ ಹಿತಚಿಂತನೆಗಳು ನಮಗೆ ಪೂರಕ ವಾತಾವರಣ ನಿರ್ಮಿಸುತ್ತವೆ. ಭವಿಷ್ಯದ ಬದುಕಿಗಾಗಿ ಈಗಲೇ ಶ್ರಮ ಪಡಬೇಕು. ಕಳೆದುಹೋದ ಕಾಲ ಮತ್ತೆ ಸಿಗದು. ಸಮಯವನ್ನು ಚನ್ನಾಗಿ ಬಳಸಿಕೊಳ್ಳಬೇಕು. ಇದು ಅಂತಾರಾಷ್ಟ್ರೀ ಯ ಸ್ಪರ್ಧಾತ್ಮಕ ಯುಗ. ಕಾಲ ವಿಳಂಬವಿಲ್ಲದೇ ಒಳ್ಳೆಯ ಗುರಿಗಾಗಿ ಹೆಜ್ಜೆ ಹಾಕುವುದು ಇಂದಿನ ಯುವಕರ ಜವಾಬ್ದಾರಿಯಾಗಬೇಕು. ಜ್ಞಾನದೇಗುಲವಾದ ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಂಡವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುತ್ತಾನೆ ಎಂದರು. ಅಧ್ಯಕ್ಷತೆವಹಿಸಿದ್ದ ಬಿಸಿಎಂ ಇಲಾಖೆ ವಿಸ್ತೀರ್ಣಾಧಿಕಾರಿ ಎಸ್. ಆನಂದ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳಿಗಾಗಿ ಒಳ್ಳೆಯ ಅವಕಾಶಗಳನ್ನು ನೀಡುತ್ತದೆ. ಅದರ ಸದುಪಯೋಗ ವಿದ್ಯಾರ್ಥಿಗಳಿಂದಾಗಬೇಕು. ಬಡ ಮಕ್ಕಳಿಗಾಗಿ ಆರ್ಥಿಕ ಹೊರೆಯಿಲ್ಲದಂತೆ ಜ್ಞಾನಾರ್ಜನೆಗೆ ಸರ್ಕಾರ ಎಲ್ಲ ಸೌಲಭ್ಯ ಒದಗಿಸುತ್ತದೆ. ಇದರ ಪ್ರಯೋಜನ ಪಡೆದವರು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಶಿಕ್ಷಕ ನಿರಂಜನ ಗುಡಿ, ಧಾರವಾಡದ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಂಪನ್ಮೂಲ ವ್ಯಕ್ತಿ ಧರೆಪ್ಪ ಬಾಗಣ್ಣನವರ, ಶ್ರೀಶೈಲ, ಬಿ.ಸಿ. ಬಾರ್ಕಿ, ಲಕ್ಮಣ ಹೊಳೆಮ್ಮನವರ, ಎಂ.ಎಚ್. ಮುಜಾವರ, ರೇಣವ್ವ ಬೆಳಗಲಿ, ರೇಖಾ ತಳವಾರ ಅತಿಥಿಗಳಾಗಿದ್ದರು. ಜಿ.ಎಸ್.ಪಾಟೀಲ ಸ್ವಾಗತಿಸಿದರು. ಅಣ್ಣಪ್ಪ ನಾಯ್ಕರ ನಿರೂಪಿಸಿದರು. ಕಾಂತೇಶ ಹೂವಪ್ಪನವರ ವಂದಿಸಿದರು.