ಕನ್ನಡಿಗರಲ್ಲಿ ಕನ್ನಡಾಭಿಮಾನ ಕ್ಷೀಣಿಸುತ್ತಿರುವುದು ವಿಷಾದನೀಯ-ಮುಚ್ಚಂಡಿ

| Published : Dec 06 2024, 09:00 AM IST

ಕನ್ನಡಿಗರಲ್ಲಿ ಕನ್ನಡಾಭಿಮಾನ ಕ್ಷೀಣಿಸುತ್ತಿರುವುದು ವಿಷಾದನೀಯ-ಮುಚ್ಚಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆಗೆ ವಿಶಿಷ್ಟ ಮೆರುಗು ತಂದುಕೊಟ್ಟ ವಚನ ಸಾಹಿತ್ಯ, ದಾಸ ಸಾಹಿತ್ಯದ ಪುನರ್ಜನ್ಮದಿಂದ ಅನಿಷ್ಟ ಪದ್ಧತಿಗಳ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದ್ದು, ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಪ್ರತಿಯೊಬ್ಬ ಕನ್ನಡಿಗರಿಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಹೇಳಿದರು.

ಅಕ್ಕಿಆಲೂರು: ಕನ್ನಡ ಭಾಷೆಗೆ ವಿಶಿಷ್ಟ ಮೆರುಗು ತಂದುಕೊಟ್ಟ ವಚನ ಸಾಹಿತ್ಯ, ದಾಸ ಸಾಹಿತ್ಯದ ಪುನರ್ಜನ್ಮದಿಂದ ಅನಿಷ್ಟ ಪದ್ಧತಿಗಳ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದ್ದು, ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಪ್ರತಿಯೊಬ್ಬ ಕನ್ನಡಿಗರಿಗಿದೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಹೇಳಿದರು.ಪಟ್ಟಣದ ಕುಮಾರ ನಗರದ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಭಾಷೆ, ನೆಲ-ಜಲಗಳ ಮೇಲೆ ನಡೆದಿರುವ ಅನ್ಯಭಾಷಿಗರ ಆಕ್ರಮಣ ಮಿತಿ ಮೀರಿದೆ. ಮನುಕುಲಕ್ಕೆ ಶ್ರೇಷ್ಠ ಶರಣಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯದ ಮೂಲ ಸಂಸ್ಕೃತಿಯ ಅಡಿಪಾಯ ಹಾಕಿಕೊಟ್ಟ ಪ್ರಾಚೀನ ಕನ್ನಡ ಭಾಷೆ ಅಭಿಮಾನಿಗಳಿಲ್ಲದೆ ಬಡವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಇತಿಹಾಸದಲ್ಲಿ ನಳಪುರಿ ಎಂದು ಗುರುತಿಸಲ್ಪಟ್ಟ ಹಾವೇರಿ ಜಿಲ್ಲೆ ಕರುನಾಡಿಗೆ ಹಲವಾರು ಧೀಮಂತ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದ್ದು, ನಮ್ಮೊಳಗಿನ ಸಂಕುಚಿತ ಭಾವನೆ ತೊರೆದು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಆಚರಣೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕಿದೆ. ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದು ನಮ್ಮ ಮೂಲ ಸಂಸ್ಕೃತಿಯ ರಕ್ಷಣೆಗೆ ಪಣತೊಡಬೇಕಾಗಿದೆ ಎಂದರು.ಜ್ಞಾನಭಾರತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ ಮಾತನಾಡಿ, ಕನ್ನಡ ಭಾಷೆ, ನೆಲ-ಜಲಕ್ಕೆ ಸಂಬಂಧಿಸಿದಂತೆ ಹಗಲಿರುಳು ಹೋರಾಡುವ ಕನ್ನಡದ ಮನಸ್ಸುಗಳಿಂದು ಸೂಕ್ತ ಪ್ರೋತ್ಸಾಹದ ಕೊರತೆಯಿಂದಾಗಿ ಎಲೆಮರೆಯ ಕಾಯಿಯಂತೆ ಉಳಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸಮಾಜದಲ್ಲಿ ಹಿರಿಯರು ಕಿರಿಯರೆನ್ನದೇ ದುಶ್ಚಟಗಳಿಗೆ ಬಲಿಯಾಗಿ ನಮ್ಮತನವನ್ನು ಬಲಿ ಕೊಡುತ್ತಿರುವ ನಾವೆಲ್ಲರೂ ಭಾಷೆ, ನೆಲ-ಜಲಗಳ ಕುರಿತು ನಮಗಿರುವ ಅಜಾಗರೂಕತೆಯನ್ನು ತೊಲಗಿಸಬೇಕಿದೆ ಎಂದರು.ಈ ಸಂದರ್ಭದಲ್ಲಿ ಕಸಾಪ ಕಾರ್ಯದರ್ಶಿ ನಾಗರಾಜ ಸಿಂಗಾಪೂರ, ಶಿವಬಸಯ್ಯ ಚಿಲ್ಲೂರಮಠ, ವೀರಭದ್ರಪ್ಪ ಉಪ್ಪಿನ, ಸಂತೋಷ ಕುಬಸದ, ಬಿ.ಎಂ. ಅರಳೇಶ್ವರ, ಅಕ್ಬರ್ ಲತೀಫಸಾಬನವರ, ಎಸ್.ಎಸ್. ಬಮ್ಮಿಗಟ್ಟಿ, ಕರಬಸಪ್ಪ ಗೊಂದಿ, ಕೃಷ್ಣ ಆಲದಕಟ್ಟಿ, ವೀರಪ್ಪ ಕುಬಸದ, ಲತಾ ಪಾಟೀಲ, ಕಾವ್ಯಾ ಬೆಲ್ಲದ, ಮಧುಮತಿ ಅಪ್ಪಣ್ಣನವರ, ಸುಜಾತಾ ಪಸಾರದ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.