ಜನರು ಇಂಗ್ಲಿಷ್ ಭಾಷಾ ದಾಸ್ಯಕ್ಕೆ ಒಳಗಾಗಿರುವುದು ವಿಷಾದನೀಯ: ಎಸ್. ಬೋರೇಗೌಡ

| Published : Nov 02 2025, 02:30 AM IST

ಜನರು ಇಂಗ್ಲಿಷ್ ಭಾಷಾ ದಾಸ್ಯಕ್ಕೆ ಒಳಗಾಗಿರುವುದು ವಿಷಾದನೀಯ: ಎಸ್. ಬೋರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ಉಳಿದ ಪ್ರಾದೇಶಿಕ ಭಾಷೆಗಿಂತ ಗಟ್ಟಿ ಮತ್ತು ಉತ್ಕ್ರಷ್ಠವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದವರು ಇಂಗ್ಲಿಷ್ ಭಾಷೆ ಬೆನ್ನು ಬಿದ್ದಿದ್ದಾರೆ. ಯಾವುದೇ ಸರ್ಕಾರ ಬಂದರೂ ಕನ್ನಡ ಭಾಷೆ ಬೆಳವಣಿಗೆಗೆ ಸಿಗಬೇಕಾದ ಸವಲತ್ತು ನೀಡುವಲ್ಲಿ ಸೋಲುತ್ತಿವೆ. ನಮ್ಮ ರಾಜಕಾರಣಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸುತ್ತಿರುವುದರಿಂದ ಸರ್ಕಾರಿ ಶಾಲೆಗಳು ಅನ್ಯಾಯಕ್ಕೆ ಒಳಗಾಗುತ್ತಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಪರ ನಿಲುವು ಜಾರಿಗೆ ತಂದಿದ್ದರೂ ಜನಗಳು ಮಾತ್ರ ಇಂಗ್ಲಿಷ್ ಭಾಷಾ ದಾಸ್ಯಕ್ಕೆ ಒಳಗಾಗಿರುವುದು ವಿಷಾದನೀಯ ಎಂದು ಭಾರತಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಎಸ್. ಬೋರೇಗೌಡ ಶನಿವಾರ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಮದ್ದೂರು ಕ್ರೀಡಾ ಬಳಗದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಕಡೆ ಕಣ್ಣೆತ್ತಿಯೂ ನೋಡದ ಜನ ತಮ್ಮ ಮಕ್ಕಳನ್ನು ಆಕರ್ಷಕ ಇಂಗ್ಲಿಷ್ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಗುಣಮಟ್ಟ ದೇವರಿಗೆ ಪ್ರೀತಿಯಾಗಿದೆ ಎಂದು ವಿಷಾದಿಸಿದರು.

ಕನ್ನಡ ಭಾಷೆ ಉಳಿದ ಪ್ರಾದೇಶಿಕ ಭಾಷೆಗಿಂತ ಗಟ್ಟಿ ಮತ್ತು ಉತ್ಕ್ರಷ್ಠವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದವರು ಇಂಗ್ಲಿಷ್ ಭಾಷೆ ಬೆನ್ನು ಬಿದ್ದಿದ್ದಾರೆ. ಯಾವುದೇ ಸರ್ಕಾರ ಬಂದರೂ ಕನ್ನಡ ಭಾಷೆ ಬೆಳವಣಿಗೆಗೆ ಸಿಗಬೇಕಾದ ಸವಲತ್ತು ನೀಡುವಲ್ಲಿ ಸೋಲುತ್ತಿವೆ. ನಮ್ಮ ರಾಜಕಾರಣಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸುತ್ತಿರುವುದರಿಂದ ಸರ್ಕಾರಿ ಶಾಲೆಗಳು ಅನ್ಯಾಯಕ್ಕೆ ಒಳಗಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆ ಮುಖಂಡ ನ.ಲಿ.ಕೃಷ್ಣ ಪ್ರಧಾನ ಭಾಷಣ ಮಾಡಿದರು. ಕ್ರೀಡಾ ಬಳಗದ ಅಧ್ಯಕ್ಷ ವಿ.ಕೆ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜಿ.ಎಸ್.ಸಿದ್ದರಾಮು, ಪದಾಧಿಕಾರಿಗಳಾದ ಪುಟ್ಟಸ್ವಾಮಿ, ನಾರಾಯಣ, ಸಿದ್ದೇಗೌಡ, ಸಿದ್ದಪ್ಪ, ಪುಟ್ಟರಾಜು, ರವಿ,ಬಸವರಾಜು, ವ್ಯವಸ್ಥಾಪಕ ಈರಪ್ಪ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.