ದೇವೇಗೌಡರು ಕಾಂಗ್ರೆಸ್‌ ಕಿತ್ತೊಗೆಯಿರಿ ಎನ್ನುವುದು ಹಾಸ್ಯಾಸ್ಪದ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ

| Published : Apr 04 2024, 01:05 AM IST

ದೇವೇಗೌಡರು ಕಾಂಗ್ರೆಸ್‌ ಕಿತ್ತೊಗೆಯಿರಿ ಎನ್ನುವುದು ಹಾಸ್ಯಾಸ್ಪದ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷವನ್ನು ಕಿತ್ತುಹಾಕಿ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಕುಹಕವಾಡಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

26ಕ್ಕೆ ಲೋಕಸಭೆ ಚುನಾವಣೆ । ಶ್ರೇಯಸ್‌ ಪಟೇಲ್‌ ಗೆಲ್ಲಿಸಲು ಮನವಿ

ಕನ್ನಡಪ್ರಭ ವಾರ್ತೆ ಹಾಸನ

ಕಾಂಗ್ರೆಸ್‌ನಿಂದಾಗಿ ಪ್ರಧಾನಿ ಹುದ್ದೆಯಿಂದ ಎಲ್ಲಾ ಹುದ್ದೆಯನ್ನು ಪಡೆದುಕೊಂಡು ಈಗ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷವನ್ನು ಕಿತ್ತುಹಾಕಿ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಕುಹಕವಾಡಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಏ.೨೬ ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಿಷ್ಠಾವಂತ ಪ್ರಾಮಾಣಿಕ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದೆ. ಆದ್ದರಿಂದ ೮ ವಿಧಾನಸಭಾ ಕ್ಷೇತ್ರದ ಪ್ರತಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಶ್ರೇಯಸ್ ಪಟೇಲ್ ರವರಿಗೆ ಹೆಚ್ಚಿನ ಮತಗಳನ್ನು ಕೊಡುವ ಮೂಲಕ ಗೆಲ್ಲಿಸುವಂತೆ ಮನವಿ ಮಾಡಿದರು.

‘ಜೆಡಿಎಸ್ ಮುಖಂಡರು ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ದೇವೇಗೌಡರನ್ನು ಪ್ರಧಾನಿ ಮಾಡಿರುವುದು ತಪ್ಪಾ! ನಂತರ ಸೋತ ವೇಳೆ ಸದಸ್ಯರನ್ನಾಗಿ ನೇಮಕ ಮಾಡಿದೆ. ಇನ್ನು ಪುತ್ರನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ನಿಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು ಎಂಪಿಯನ್ನಾಗಿ ಮಾಡಲು ಇಡೀ ಕಾಂಗ್ರೆಸ್ ನಿಮ್ಮ ಪರ ನಿಂತು ಗೆಲ್ಲಿಸಿರುವುದಕ್ಕೆ ಈಗ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಬೇಕು ಎಂದು ಹೇಳಿಕೆ ಕೊಡುತ್ತೀರಿ’ ಎಂದು ಬೇಸರ ವ್ಯಕ್ಷಪಡಿಸಿದರು.

‘ನಿಮ್ಮ ಪಕ್ಷಕ್ಕೆ ಸಹಾಯ ಮಾಡಿದವರನ್ನು ಮುಗಿಸಬೇಕು ಎಂಬುದು ನಿಮ್ಮ ಪಕ್ಷದ ಸಿದ್ಧಾಂತವೇ?. ತಪ್ಪಾಗಿದೆ ಕ್ಷಮಿಸಿ ಎನ್ನುವುದು ಅರ್ಥವಿಲ್ಲದ ಮಾತು. ಇಷ್ಟೆಲ್ಲಾ ಅನುಕೂಲವನ್ನು ಜೆಡಿಎಸ್‌ಗೆ ಮಾಡಿರುವ ಕಾಂಗ್ರೆಸ್ ಅನ್ನು ಕಿತ್ತು ಹಾಕಬೇಕು ಎನ್ನುವ ನೀವು ಮಾಡಿರುವ ತಪ್ಪಾದರೂ ಏನು? ಈ ಬಗ್ಗೆ ಜನತೆ ಮುಂದೆ ಇಡಬೇಕಿದೆ’ ಎಂದು ಹೇಳಿದರು.

‘ಮಾ.೨೬ ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು. ಇದರಲ್ಲಿ ಅಭ್ಯರ್ಥಿ ಶ್ರೇಯಸ್ ಪಟೇಲ್, ಕೆ.ಎಂ.ಶಿವಲಿಂಗೇಗೌಡ, ಜವರೇಗೌಡ, ಎಚ್.ಕೆ. ಮಹೇಶ್ ಸೇರಿ ನನ್ನ ನೇತೃತ್ವದಲ್ಲಿ ಸಭೆ ಜರುಗಿತು. ಕಟ್ಟಾಯ ಹೋಬಳಿಗೆ ಏನು ಅನ್ಯಾಯವಾಗಿತ್ತು ಎಂಬುದನ್ನು ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಪ್ರಸ್ತಾಪ ಮಾಡಿದರು. ಜೆಡಿಎಸ್ ಮಾಡಿದ ಅನ್ಯಾಯವನ್ನು ಜನರಿಗೆ ಹೇಳಬಾರದಾ, ಒಂದೇ ಒಂದು ಕಾರಣಕ್ಕಾಗಿ ಕಟ್ಟಾಯ ಹೋಬಳಿಯನ್ನು ಸಕಲೇಶಪುರ ಮಿಸಲು ಕ್ಷೇತ್ರಕ್ಕೆ ಸೇರಿಸಿದ್ದೀರಿ ಎಂಬುದನ್ನು ಭಾಷಣದಲ್ಲಿ ಜನತೆ ಮುಂದೆ ಇಟ್ಟಿರುವುದು ತಪ್ಪಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೆಲ ದಿನಗಳ ಹಿಂದೆ ಜೆಡಿಎಸ್ ಸಬೆಯನ್ನು ಕಟ್ಟಾಯದಲ್ಲಿ ನಡೆಸಿ ಭಾಷಣದಲ್ಲಿ ಮಾತನಾಡುವ ವೇಳೆ ಕಟ್ಟಾಯಕ್ಕೆ ೩೦೦ ಕೋಟಿ ರು. ತಂದಿರುವುದಾಗಿ ಹೇಳಲಾಗಿದೆ. ೭೦೦ ಕೋಟಿ ರು. ಈ ಕಟ್ಟಾಯಕ್ಕೆ ತಂದಿರುವುದಾಗಿ ಈ ಹಿಂದೆ ಶಾಸಕರಾಗಿದ್ದ ಎಚ್.ಕೆ. ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಇಷ್ಟೊಂದು ಅನುದಾನ ತಂದಿದ್ದರೇ ಯಾವುದಾದರೂ ಒಂದು ಅಭಿವೃದ್ಧಿ ಮಾಡಿರುವ ಉದಾಹರಣೆಯನ್ನು ನೀಡಲಿ. ಲೋಕಸಭೆಯ ಜಿಲ್ಲೆಯ ಅಭಿವೃದ್ಧಿಯ ಸಾಧನೆ ಪುಸ್ತಕವನ್ನು ಕೆಲ ದಿನಗಳ ಹಿಂದೆ ಜೆಡಿಎಸ್ ಪುಸ್ತಕ ಬಿಡುಗಡೆ ಮಾಡಿದೆ. ಇದರಲ್ಲಿ ಕಟ್ಟಾಯಕ್ಕೆ ಒಂದು ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಇಲ್ಲ’ ಎಂದು ದೂರಿದರು.

ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಗೆವಾಳ್ ದೇವಪ್ಪ, ಕುಮಾರ್, ಮೊಹಮ್ಮದ್ ಆಲಿ, ಸ್ವಾಮಿಗೌಡ ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾ ವಕ್ತಾರ ದೇವರಾಜೇಗೌಡ.